ಬೆಂಗಳೂರು: ಮುಂಬೈ ಮೂಲದ ರೀಲ್ಯಾಬ್ಸ್ ಸಂಸ್ಥೆ ‘ಆಕರ ಕೋಶ (ಸ್ಟೆಮ್ ಸೆಲ್) ಸಂರಕ್ಷಣೆ, ಚಿಕಿತ್ಸೆ ಹಾಗೂ ಸಂಶೋಧನಾ ಕೇಂದ್ರ’ವನ್ನು ಶೀಘ್ರದಲ್ಲೇ ನಗರದಲ್ಲಿ ಪ್ರಾರಂಭಿಸಲಿದೆ.
‘ನಗರದಲ್ಲಿ ಒಂದೇ ಸೂರಿನಡಿ ಆಕರ ಕೋಶ ಸಂರಕ್ಷಣೆ, ಚಿಕಿತ್ಸೆ ಹಾಗೂ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸುವ ಸಲುವಾಗಿ 50 ಕೋಟಿ ಹೂಡಿಕೆ ಮಾಡಲಾಗಿದೆ. ನಗರದ ಹೊರವಲಯದಲ್ಲಿ ಕೆಲವೇ ತಿಂಗಳಿನಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ರೋಹಿತ್ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘20 ಕೋಟಿ ವೆಚ್ಚದಲ್ಲಿ ಆಕರ ಕೋಶ ಪ್ರಯೋಗಾಲಯವನ್ನು ನಿರ್ಮಿಸುವ ಯೋಜನೆ ಇದ್ದು, ಪ್ರಯೋಗಾಲಯವು 2 ಲಕ್ಷ ಜನರ ಆಕರ ಕೋಶ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುತ್ತದೆ. ಅದರ ಸಮಿಪದಲ್ಲೇ 20 ಕೋಟಿ ವೆಚ್ಚದಲ್ಲಿ ಆಕರ ಕೋಶ ಚಿಕಿತ್ಸಾ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಜತೆಗೆ 10 ಕೋಟಿ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲಾಗುವುದು’ ಎಂದರು.
‘ಆಕರ ಕೋಶ ಸಂಗ್ರಹಿಸಲು 21 ವರ್ಷಕ್ಕೆ 55–60 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ. ಸಾರ್ವಜನಿಕರು ಒಂದೇ ಬಾರಿ ಬೇಕಾದರೂ ಹಣವನ್ನು ಪಾವತಿಸಬಹುದು. ಇಲ್ಲವಾದಲ್ಲಿ ಮೊದಲು 20 ಸಾವಿರ ಹಣ ನೀಡಿ, ನಂತರ ಪ್ರತಿ ತಿಂಗಳು ಕಂತಿನ ಮೂಲಕ 3 ಸಾವಿರ ಕಟ್ಟಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 88849–55611.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.