ADVERTISEMENT

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೌಕರರ ಸಂಘ: ಸುವರ್ಣ ಮಹೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2011, 19:00 IST
Last Updated 27 ಆಗಸ್ಟ್ 2011, 19:00 IST
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೌಕರರ ಸಂಘ: ಸುವರ್ಣ ಮಹೋತ್ಸವದ ಸಂಭ್ರಮ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೌಕರರ ಸಂಘ: ಸುವರ್ಣ ಮಹೋತ್ಸವದ ಸಂಭ್ರಮ   

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ (ಎಸ್‌ಬಿಎಂ) ನೌಕರರ ಏಕಮಾತ್ರ ಸಂಘಟನೆಯಾದ `ಎಸ್‌ಬಿಎಂ ನೌಕರರ ಸಂಘ~ವು, ಸುವರ್ಣ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ.

ಬ್ಯಾಂಕ್ ನೌಕರರ ಗೌರವ ಎತ್ತಿ ಹಿಡಿಯಲು 1960ರ ಅಕ್ಟೋಬರ್ 23ರಂದು ಸಂಘ ಅಸ್ತಿತ್ವಕ್ಕೆ ಬಂದಿತು. ಐದು ದಶಕಗಳ ಇತಿಹಾಸದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ ಯಾವುದೇ ಮುಷ್ಕರ ನಡೆಸದೇ ದ್ವಿಪಕ್ಷೀಯ ಮಾತುಕತೆ ಮೂಲಕವೇ ಬೇಡಿಕೆಗಳನ್ನು ಈಡೇರಿಸಿಕೊಂಡ ಹೆಗ್ಗಳಿಕೆಯನ್ನು ಈ ಸಂಘಟನೆ ಹೊಂದಿದೆ.

ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಸಂಘದ ಅಧ್ಯಕ್ಷ ಎಚ್.ಎಸ್.ಹಿರಿಯಣ್ಣಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ವೇಣುಗೋಪಾಲ್, `1960ರಲ್ಲಿ ನೌಕರರನ್ನು ಅವಮಾನಿಸಿದ ಘಟನೆಯ ವಿರುದ್ಧ ದನಿ ಎತ್ತಲು ನೌಕರರ ಸಂಘವನ್ನು ಹುಟ್ಟು ಹಾಕಲಾಯಿತು. ಅಂದು ಸ್ಥಾಪಕ ಅಧ್ಯಕ್ಷರಾಗಿ ಪಿ.ಎಸ್.ಸುಂದರೇಶನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಜೆ.ವೆಂಕಟರಾಮ್ ಸಂಘದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು~ ಎಂದು ಸ್ಮರಿಸಿದರು.

`ಯಾವುದೇ ಕಾರ್ಮಿಕ ಸಂಘಟನೆ ಅಥವಾ ಸಂಸ್ಥೆ 50 ವರ್ಷ ಬದುಕುಳಿಯುವುದೇ ಒಂದು ದೊಡ್ಡ ಸಾಧನೆ. ಎಸ್‌ಬಿಎಂ ನೌಕರರ ಸಂಘ ಉಳಿದು ಬೆಳೆದಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಸದಸ್ಯ ಸಂಘವಾಗಿ ಪ್ರತಿ ಹಂತದಲ್ಲೂ ಯಶಸ್ಸು ಸಾಧಿಸಿ, ಶಕ್ತಿಯುತ ಸಂಘಟನೆಯಾಗಿ ಹೊರಹೊಮ್ಮಿದೆ~ ಎಂದು ಅವರು ಹೇಳಿದರು.

`ಬ್ಯಾಂಕಿದ್ದರೆ ನಾವು... ಎಂಬ ತತ್ವದಲ್ಲಿ ಅಚಲ ನಂಬಿಕೆ ಇರಿಸಿಕೊಂಡಿರುವ ನೌಕರರ ಸಂಘಟನೆಯು ಭಾರತೀಯ ಸ್ಟೇಟ್ ಬ್ಯಾಂಕಿನೊಂದಿಗೆ (ಎಸ್‌ಬಿಐ)  ಎಸ್‌ಬಿಎಂ ವಿಲೀನವಾಗುವುದನ್ನು ಮಾತ್ರ ಖಂಡ ತುಂಡವಾಗಿ ವಿರೋಧಿಸುತ್ತಿದೆ~ ಎಂದು ಅವರು ತಿಳಿಸಿದರು.

`ಪ್ರಕೃತಿ ವಿಕೋಪದಿಂದ ತೊಂದರೆಗೀಡಾದ ಪ್ರದೇಶಗಳ ಜನರಿಗೆ ಸಂಘಟನೆಯು ವಿಭಿನ್ನ ರೀತಿಯಲ್ಲಿ ನೆರವು ನೀಡಿದೆ. ಒಡಿಶಾದಲ್ಲಿ ಎರಡು ಶಾಲೆಗಳನ್ನು ನಿರ್ಮಿಸಿಕೊಟ್ಟೆವು. ಗುಜರಾತ್‌ನಲ್ಲಿ ಭೂಕಂಪ ಪರಿಹಾರ ಕಾರ್ಯದಲ್ಲಿ ಭಾಗಿಯಾದೆವು. ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿಯಿಂದ ಸಂತ್ರಸ್ತರಾದವರಿಗೆ ಸಹಾಯ ಹಸ್ತ ಚಾಚಿದೆವು~ ಎಂದು ಅವರು ವಿವರಿಸಿದರು.

ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿಗಳಾದ ಕಟ್ಟಿ, ಎಸ್.ಆರ್.ಪವಾರ್, ಕಾರ್ಯಕಾರಿ ಸದಸ್ಯ ಕೆ.ಮುರಳೀಧರ ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು.

ಇಂದಿನ ಕಾರ್ಯಕ್ರಮ
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಭಾನುವಾರ (ಆ. 28) ಬೆಳಿಗ್ಗೆ 10ಕ್ಕೆ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಯೂನಿಯನ್‌ನ ಸಂಸ್ಥಾಪಕ ಅಧ್ಯಕ್ಷ ಪಿ.ಎಸ್.ಸುಂದರೇಶನ್ ಅವರೇ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸುತ್ತಿರುವುದು ವಿಶೇಷ. ನಿವೃತ್ತ  ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಂಘಟನೆಗಾಗಿ ಆರಂಭದಿಂದ ಇಲ್ಲಿಯವರೆಗೆ ದುಡಿದ ಮುಖಂಡರನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
 

ಎಸ್‌ಬಿಐ ಜತೆ ವಿಲೀನಕ್ಕೆ ತೀವ್ರ ವಿರೋಧ
ಬೆಂಗಳೂರು:
  `2013ಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ (ಎಸ್‌ಬಿಎಂ) 100 ವರ್ಷ ತುಂಬಲಿದೆ. ಮೈಸೂರು ಮಹಾರಾಜರು ಮತ್ತು ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ 1913ರಲ್ಲಿ ಸ್ಥಾಪನೆಯಾದ ಬ್ಯಾಂಕು ಸುಭದ್ರವಾಗಿ ಬೆಳೆದು ನಿಂತಿದೆ~ ಎಂದು ಎಸ್‌ಬಿಎಂ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಹಿರಿಯಣ್ಣಯ್ಯ ತಿಳಿಸಿದರು.

`ಐತಿಹಾಸಿಕ ಮಹತ್ವವುಳ್ಳ ಬ್ಯಾಂಕನ್ನು ಮತ್ತೊಂದು ಬ್ಯಾಂಕ್ ಜತೆ ವಿಲೀನಗೊಳಿಸುವುದು ಎಳ್ಳಷ್ಟೂ ಸರಿಯಲ್ಲ. ವಿಲೀನ ಪ್ರಕ್ರಿಯೆಯಿಂದ ಬ್ಯಾಂಕಿನ ನೌಕರರ ಹಿತಾಸಕ್ತಿಗೆ ಮಾತ್ರ ಧಕ್ಕೆಯಾಗುವುದಿಲ್ಲ; ಕರ್ನಾಟಕದ ಪ್ರತಿಷ್ಠಿತ ಬ್ಯಾಂಕ್ ತನ್ನ ಗುರುತು ಕಳೆದುಕೊಳ್ಳುವ ಅಪಾಯವೂ ಇದೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.

`ವರ್ಷದ ಹಿಂದೆ ಬ್ಯಾಂಕಿನ ಕೇಂದ್ರ ಕಚೇರಿ ಆವರಣದಲ್ಲಿ ವಿಲೀನ ವಿರೋಧಿಸಿ ಆಹೋರಾತ್ರಿ ಉಪವಾಸ ಮುಷ್ಕರ ನಡೆಸಿದ್ದೆವು~ ಎಂದು ಅವರು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಎನ್.ವೇಣುಗೋಪಾಲ್ ಮಾತನಾಡಿ, `ಬ್ಯಾಂಕುಗಳ ವಿಲೀನವು ನೌಕರರ ಪಾಲಿಗೆ ಕಹಿ ಅನುಭವವನ್ನೇ ಕೊಟ್ಟಿದೆ. ಎಸ್‌ಬಿಐ ಜತೆ ವಿಲೀನವಾದ ಸೌರಾಷ್ಟ್ರ ಮತ್ತು ಇಂದೋರ್ ಬ್ಯಾಂಕ್‌ಗಳ ನೌಕರರಿಗೆ ನೀಡಲಾಗಿದ್ದ ಭರವಸೆಗಳನ್ನು ಎಸ್‌ಬಿಐ ಆಡಳಿತ ಮಂಡಳಿ ಈಡೇರಿಸಿಲ್ಲ~ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT