ADVERTISEMENT

ಸ್ಥಾಯಿ ಸಮಿತಿ ಚುನಾವಣೆ ನ.10ಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 20:30 IST
Last Updated 27 ಅಕ್ಟೋಬರ್ 2017, 20:30 IST

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಚುನಾವಣೆಗೆ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆಯನ್ನು ನವೆಂಬರ್‌ 10ಕ್ಕೆ ಮುಂದೂಡಲಾಯಿತು.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಹಾಗೂ ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಾಮಪತ್ರ ಸಲ್ಲಿಕೆಗೆ ಬೆಳಿಗ್ಗೆ 9.30ರವರೆಗೆ ಅವಕಾಶವಿತ್ತು. ಆದರೆ, ಒಬ್ಬರೂ ನಾಮಪತ್ರ ಸಲ್ಲಿಸಲಿಲ್ಲ. ಚುನಾವಣಾ ಪ್ರಕ್ರಿಯೆ 11.30ಕ್ಕೆ ಇದ್ದಿದ್ದರಿಂದ ಅಲ್ಲಿಯವರೆಗೂ ಚುನಾವಣಾಧಿಕಾರಿಗಳು ಕಾದಿದ್ದರು.

‘ಚುನಾವಣೆಗೆ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ. ಪಾಲಿಕೆ ಸದಸ್ಯರೂ ಬಂದಿಲ್ಲ. ಹೀಗಾಗಿ ಚುನಾವಣೆಯನ್ನು ನವೆಂಬರ್‌ 10ರಂದು ಬೆಳಿಗ್ಗೆ 11.30ಕ್ಕೆ ಮುಂದೂಡಲಾಗಿದೆ. ನ.9ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ’ ಎಂದು ಜಯಂತಿ ಘೋಷಿಸಿದರು.

ADVERTISEMENT

‘ವಿಶ್ವಾಸಕ್ಕೆ ತೆಗೆದುಕೊಳ್ಳದ ಪ್ರಾದೇಶಿಕ ಆಯುಕ್ತೆ’:

‘ಸ್ಥಾಯಿ ಸಮಿತಿಗಳ ಅಧ್ಯಕ್ಷ, ಸದಸ್ಯರ ಚುನಾವಣೆ ದಿನಾಂಕ ನಿಗದಿ ವಿಷಯದಲ್ಲಿ ಪ್ರಾದೇಶಿಕ ಆಯುಕ್ತರು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಕ್ಟೋಬರ್‌ 25ರಂದು ಚುನಾವಣಾ ದಿನಾಂಕವನ್ನು ಘೋಷಿಸಿದ್ದರು. ಅಂದು ವಿಧಾನಸೌಧದ ವಜ್ರಮಹೋತ್ಸವ ಇದ್ದಿದ್ದರಿಂದ ಶುಕ್ರವಾರಕ್ಕೆ ಮುಂದೂಡಲಾಯಿತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ಯಾರಿಗೆಷ್ಟು ಸಮಿತಿಗಳನ್ನು ನೀಡಬೇಕು ಎಂಬುದರ ಲೆಕ್ಕಾಚಾರದಲ್ಲಿ ಇದ್ದಾರೆ. ಆದರೆ, ಪ್ರಾದೇಶಿಕ ಆಯುಕ್ತರು ಮೂರೂ ಪಕ್ಷಗಳ ಜತೆ ಚರ್ಚಿಸಿ ಚುನಾವಣಾ ದಿನಾಂಕವನ್ನು ನಿಗದಿ ಮಾಡಬೇಕಿತ್ತು’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಸ್ಥಾಯಿ ಸಮಿತಿಯ ಸದಸ್ಯರಾಗಿ ಬಿಜೆಪಿಯ ಐವರು ಆಯ್ಕೆ ಆಗಲಿದ್ದಾರೆ. ಈ ಸದಸ್ಯರ ಪಟ್ಟಿಯನ್ನು ಶೀಘ್ರದಲ್ಲೇ ಸಿದ್ಧಪಡಿಸುತ್ತೇವೆ’ ಎಂದರು.

‘ಚುನಾವಣಾ ಪ್ರಕ್ರಿಯೆಗಾಗಿ ₹6 ಲಕ್ಷಕ್ಕಿಂತ ಹೆಚ್ಚಿನ ವೆಚ್ಚವಾಗಿದೆ. 200ಕ್ಕೂ ಹೆಚ್ಚಿನ ಜನರಿಗೆ ತಿಂಡಿ ಮಾಡಿಸಿದ್ದು, ಇದಕ್ಕೆ ₹3 ಲಕ್ಷ ಖರ್ಚಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ’ ಎಂದು ದೂರಿದರು.

‘5 ಸ್ಥಾಯಿ ಸಮಿತಿಗಳಿಗೆ ಬೇಡಿಕೆ’

‘ಜೆಡಿಎಸ್‌ಗೆ ಮೇಯರ್‌ ಸ್ಥಾನ ಬಿಟ್ಟುಕೊಟ್ಟಿಲ್ಲ. ಹೀಗಾಗಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿ ಒಟ್ಟು 5 ಸ್ಥಾಯಿ ಸಮಿತಿಗಳಿಗೆ ಬೇಡಿಕೆ ಇಡಬೇಕು ಎಂದು ಗುರುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ವಿಷಯವನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೂ ತಿಳಿಸಿದ್ದೇವೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂಬುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ಜೆಡಿಎಸ್‌ ಪಕ್ಷದ ನಾಯಕಿ ಆರ್‌.ರಮಿಳಾ ಉಮಾಶಂಕರ್‌ ತಿಳಿಸಿದರು.

‘ನಾನು ಉಪಮೇಯರ್‌ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಆ ಸ್ಥಾನ ಸಿಗಲಿಲ್ಲ. ಹೀಗಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರ ಬಳಿ ಮನವಿ ಮಾಡಿದ್ದೇನೆ. ಮಾರಪ್ಪನಪಾಳ್ಯ ವಾರ್ಡ್‌ನ ಎಂ.ಮಹದೇವ ಸಹ ಆಕಾಂಕ್ಷಿಯಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.