ADVERTISEMENT

ಸ್ಥಾಯಿ ಸಮಿತಿ ಚುನಾವಣೆ ಸೆ.16ಕ್ಕೆ ಮುಂದೂಡಿಕೆ

ಬಿಬಿಎಂಪಿ ಸಭೆಯಲ್ಲಿ ಸದಸ್ಯ ಬಲದ ಕೊರತೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು:   ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆಯಬೇಕಿದ್ದ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಚುನಾವಣೆಯನ್ನು ಸದಸ್ಯ ಬಲದ (ಕೋರಂ) ಕೊರತೆಯಿಂದ ಸೋಮವಾರಕ್ಕೆ (ಸೆ.16) ಮುಂದೂಡಲಾಯಿತು.

ಚುನಾವಣಾ ಪ್ರಕ್ರಿಯೆ ನಡೆಸಲು ಪ್ರಾದೇಶಿಕ ಆಯುಕ್ತ ಗೌರವ್‌ ಗುಪ್ತಾ ಪಾಲಿಕೆಯ ಕೇಂದ್ರ ಕಚೇರಿ ಆವರಣದ ಕೆಂಪೇಗೌಡ ಪೌರ ಸಭಾಂಗಣಕ್ಕೆ ಬೆಳಿಗ್ಗೆ 10 ಗಂಟೆಗೆ ಬಂದರು. ಸಭೆಯಲ್ಲಿ ಕೆಲವೇ ಮಂದಿ ಸದಸ್ಯರಿದ್ದು, ಚುನಾವಣೆ ನಡೆಸಲು ಸದಸ್ಯ ಬಲದ ಕೊರತೆ ಕಂಡುಬಂತು.

10.20ರವರೆಗೂ ಕಾದ ನಂತರ ಗೌರವ್‌ ಗುಪ್ತಾ ಚುನಾವಣಾ ಪ್ರಕ್ರಿಯೆಯನ್ನು ಸೆ.16ಕ್ಕೆ ಮುಂದೂಡಿದರು. ಬೆಳಿಗ್ಗೆ 10.30 ಹಾಗೂ 11 ಗಂಟೆಯ ವೇಳೆಗೆ ಕೆಂಪೇಗೌಡ ಪೌರ ಸಭಾಂಗಣಕ್ಕೆ ಬಂದ ಕೆಲ ಸದಸ್ಯರು, ‘ನಮಗೆ ತಿಳಿಸದೇ ಸಭೆಯನ್ನು ಮುಂದೂಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಚುನಾವಣಾ ಸಭೆಯ ಬಗ್ಗೆ ಕೌನ್ಸಿಲ್‌ ಕಾರ್ಯದರ್ಶಿಯವರು ಎಲ್ಲ ಸದಸ್ಯರಿಗೆ ಈ ಹಿಂದೆಯೇ ಸೂಚನೆ ನೀಡಿದ್ದರು. ಸದಸ್ಯ ಬಲದ ಕೊರತೆಯಿಂದ ಪ್ರಾದೇಶಿಕ ಆಯುಕ್ತರು ಸಭೆಯನ್ನು ಮುಂದೂಡಿದ್ದಾರೆ. ಆದರೆ, ತಡವಾಗಿ ಬಂದ ಸದಸ್ಯರು ಸಭೆ ಸೇರುವ ಮುನ್ನವೇ ಮುಂದೂಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.