ADVERTISEMENT

`ಸ್ವಚ್ಛತೆ ಕಾಪಾಡಿಕೊಳ್ಳಿ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 20:08 IST
Last Updated 8 ಜುಲೈ 2013, 20:08 IST
ನೆಲಮಂಗಲ ವಿಧಾನಸಭಾ ಕ್ಷೇತ್ರದ ಕೋರಮಂಗಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗಂಗಾ ಕಾವೇರಿ ಕಾಲೇಜಿನ ಸಮಾಜಕಾರ್ಯ ವಿಭಾಗವು ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಬಾಲಕೃಷ್ಣ ಆರೋಗ್ಯ ತಪಾಸಣೆ ನಡೆಸಿದರು
ನೆಲಮಂಗಲ ವಿಧಾನಸಭಾ ಕ್ಷೇತ್ರದ ಕೋರಮಂಗಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗಂಗಾ ಕಾವೇರಿ ಕಾಲೇಜಿನ ಸಮಾಜಕಾರ್ಯ ವಿಭಾಗವು ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಬಾಲಕೃಷ್ಣ ಆರೋಗ್ಯ ತಪಾಸಣೆ ನಡೆಸಿದರು   

ನೆಲಮಂಗಲ: `ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಂಡು ಪರಿಸರ ನೈರ್ಮಲ್ಯ ಕಾಪಾಡಿಕೊಂಡರೆ ಸೊಳ್ಳೆಗಳ ಹಾವಳಿ ಕಡಿಮೆಯಾಗಿ ಡೆಂಗೆ ಮತ್ತು ಮಲೇರಿಯಾ ದೂರವಾಗುತ್ತದೆ. ಡೆಂಗೆ ಜ್ವರಕ್ಕೆ ಸೂಕ್ತ ಔಷಧಿ ಇಲ್ಲದ ಕಾರಣ ಮುಂಜಾಗ್ರತಾ ಕ್ರಮವೇ ದಿವ್ಯ ಔಷಧಿ' ಎಂದು ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಪ್ರಶಾಂತ್ ತಿಳಿಸಿದರು.

ಸ್ಥಳೀಯ ವಿಧಾನಸಭಾ ಕ್ಷೇತ್ರದ ಕೋರಮಂಗಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೆಂಗಳೂರಿನ ಗಂಗಾ ಕಾವೇರಿ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಸಮಾಜಕಾರ್ಯ ವಿಭಾಗವು ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ಶಸ್ತ್ರಚಿಕಿತ್ಸಾ ತಜ್ಞ ಡಾ.ಬಾಲಕೃಷ್ಣ ಮಾತನಾಡಿ, `ಶುದ್ಧ ನೀರು, ಪರಿಪೂರ್ಣ ಆಹಾರ, ಸ್ವಚ್ಛ ಪರಿಸರದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ವೈದ್ಯರ ಅಗತ್ಯವೂ ಕಡಿಮೆಯಾಗುತ್ತದೆ' ಎಂದರು.

ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯ ವ್ಯವಸ್ಥಾಪಕ ನರೇಶ್‌ಕುಮಾರ್, ಮುಖ್ಯಶಿಕ್ಷಕ ಜಿ.ವಿ.ರಾಮಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಆನಂದ್ ಉಪಸ್ಥಿತರಿದ್ದರು.

ಆರಂಭದಲ್ಲಿ ಗಂಗಾ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಅಂಜನ್‌ಕುಮಾರ್ ನೇತೃತ್ವದಲ್ಲಿ ಜಾಗೃತಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರನ್ನು ಒಳಗೊಂಡಂತೆ 210 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಮೊನಾರ್ಕ್ ಕಂಪೆನಿಯ ರಾಜಾರೆಡ್ಡಿ ಉಚಿತ ಔಷಧಿಗಳನ್ನು ವಿತರಿಸಿದರು.

ಅಪರಿಚಿತ ಯುವಕ ಸಾವು
ನೆಲಮಂಗಲ:
ಇಲ್ಲಿಗೆ ಸಮೀಪದ ಮಾಕಳಿ ಬಳಿ ಶುಕ್ರವಾರ ರಾತ್ರಿ ಕಾರು ಹರಿದು ರಸ್ತೆ ದಾಟುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ಗಾಯಗೊಂಡ ಆತನನನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.