ADVERTISEMENT

‘ಸ್ವಲ್ಪ ಮೈಮರೆತಿದ್ದರೂ ನಾನೂ ಹುಲಿ ಬಾಯಿ ಸೇರುತ್ತಿದ್ದೆ’

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬಿಳಿಹುಲಿಗಳ ದಾಳಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಆಂಜಿ ಅವರ ತಂದೆ ನವಣಯ್ಯ, ತಾಯಿ ತಾಯಕ್ಕ, ಪತ್ನಿ ಅಕ್ಕಮಹಾದೇವಿ ಹಾಗೂ ಕಿರಿ ಮಗ ಧರ್ಮರಾಜ್ ಅವರು ಉದ್ಯಾನದ ಮುಂದೆ ಕಣ್ಣೀರಿಟ್ಟರು. ಆಂಜನೇಯ (ಒಳಚಿತ್ರ) ಇದ್ದಾರೆ. –ಪ್ರಜಾವಾಣಿ ಚಿತ್ರ
ಆಂಜಿ ಅವರ ತಂದೆ ನವಣಯ್ಯ, ತಾಯಿ ತಾಯಕ್ಕ, ಪತ್ನಿ ಅಕ್ಕಮಹಾದೇವಿ ಹಾಗೂ ಕಿರಿ ಮಗ ಧರ್ಮರಾಜ್ ಅವರು ಉದ್ಯಾನದ ಮುಂದೆ ಕಣ್ಣೀರಿಟ್ಟರು. ಆಂಜನೇಯ (ಒಳಚಿತ್ರ) ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸ್ವಲ್ಪ ಮೈಮರೆತಿದ್ದರೆ ನಾನೂ ಹುಲಿಗಳ ಬಾಯಿಗೆ ತುತ್ತಾಗಬೇಕಿತ್ತು. ಆಂಜನೇಯ ಅವರ ಕಿರುಚಾಟ ಕೇಳಿ ಎಚ್ಚೆತ್ತಿದ್ದರಿಂದ ನನ್ನ ಜೀವ ಉಳಿಯಿತು’...

ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿ ಆಂಜನೇಯ ಅಲಿಯಾಸ್ ಆಂಜಿ (42) ಮೇಲೆ ಹುಲಿಗಳ ದಾಳಿ ಮಾಡಿದ ಪ್ರಕರಣದ ಪ್ರತ್ಯಕ್ಷದರ್ಶಿ ಹಾಗೂ ಪ್ರಾಣಿಪಾಲಕ ಹುಚ್ಚೇಗೌಡ ಅವರು ಶನಿವಾರ ನಡೆದ ದಾಳಿ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದು ಹೀಗೆ....

‘ಕೆಲ ವರ್ಷಗಳಿಂದ ಆಂಜಿ ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅ.1ರಿಂದ ಅವರನ್ನು ಉದ್ಯಾನದೊಳಗೆ ಕೆಲಸ ಮಾಡಲು ನಿಯೋಜಿಸಲಾಗಿತ್ತು. ಮಾಮೂಲಿ ಸಹಾಯಕ ನಾರಾಯಣಪ್ಪ ರಜೆ ಮೇಲಿದ್ದ ಕಾರಣಕ್ಕೆ ಪ್ರಾಣಿಗಳಿಗೆ ಆಹಾರ ನೀಡಲು ಸಂಜೆ ಆಂಜಿ ಅವರನ್ನು ಜತೆಯಲ್ಲಿ ಕರೆದೊಯ್ದಿದ್ದೆ’ ಎಂದು ಹೇಳಿದರು.

ADVERTISEMENT

‘ಇಬ್ಬರು ಪ್ರತ್ಯೇಕವಾಗಿ ಬೋನುಗಳಲ್ಲಿ ಆಹಾರವಿಡುತ್ತಿದ್ದೆವು. ಬಿಳಿ ಹುಲಿಗಳ ಬೋನಿನಲ್ಲಿ ಬಿದ್ದಿದ್ದ ಮೂಳೆಗಳನ್ನು ತೆಗೆಯಲು ಅದರೊಳಗೆ ಆಂಜಿ ಹೋಗಿದ್ದಾರೆ. ಆಗ ವನ್ಯಾ ಹಾಗೂ ಝಾನ್ಸಿ ಹೆಸರಿನ 18 ತಿಂಗಳ ಬಿಳಿ ಹುಲಿಗಳು ಅವರ ಮೇಲೆರಗಿದವು’ ಎಂದರು.

‘ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದೆ. ಅಷ್ಟರಲ್ಲಾಗಲೇ ಹುಲಿಗಳು ಆಂಜಿ ಮೈಮೇಲೆ ಎರಗಿ ರಕ್ತ ಹೀರಿದ್ದವು. ಅವರನ್ನು ಕಾಪಾಡಲು ಯತ್ನಿಸಿದೆ. ಆದರೂ ಸಾಧ್ಯವಾಗಲಿಲ್ಲ. ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಇತರ ಸಿಬ್ಬಂದಿ ಪಟಾಕಿ ಸಿಡಿಸಿ ಅವುಗಳನ್ನು ಓಡಿಸಲು ಯತ್ನಿಸಿದರು. ಅದು ಸಾಧ್ಯವಾಗಲಿಲ್ಲ’ ಎಂದರು.

‘ಸುಮಾರು ನಾಲ್ಕು ಗಂಟೆಗಳು ಮೃತದೇಹ ಬೋನಿನಲ್ಲೇ ಇತ್ತು. ಹುಲಿಗಳು ಒಂದರಂತೆ ಒಂದು ಅವರ ಮೇಲೆ ದಾಳಿ ಮಾಡುತ್ತಿದ್ದವು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಬಂದರು. ಬಳಿಕ ಸುರಕ್ಷತಾ ಕ್ರಮಕೈಗೊಂಡು ಮೃತದೇಹವನ್ನು ಹೊರ ತಂದೆವು’ ಎಂದು ಹೇಳಿದರು.

ಉದ್ಯಾನದ ಮುಂದೆ ಪ್ರತಿಭಟನೆ: ‘ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ’ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಉದ್ಯಾನದ ಪ್ರವೇಶದ್ವಾರದ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು. ಉದ್ಯಾನವನ್ನು ಬಂದ್ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಉದ್ಯಾನದ ಕೆಲಸಗಾರರ ಬಗ್ಗೆ ಅಧಿಕಾರಿಗಳಿಗೆ ಕಾಳಜಿಯಿಲ್ಲ. ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಇಂಥ ಅನಾಹುತ ಸಂಭವಿಸುತ್ತಿರಲಿಲ್ಲ. ಪ್ರಾಣಿಗಳಿಗೆ ಆಹಾರ ಪೂರೈಸುವಾಗ ಸುರಕ್ಷತೆ ಕ್ರಮಕೈಗೊಂಡಿಲ್ಲ’ ಎಂದು ಮೃತರ ಸಂಬಂಧಿ ಸಂಪಂಗಿ ಆರೋಪಿಸಿದರು.

‘ಸಿಬ್ಬಂದಿ ಪ್ರಕಾರ, ಆಹಾರ ಹಾಕುವಾಗ ಹುಲಿಗಳು ಆಂಜಿ ಮೇಲೆ ದಾಳಿ ಮಾಡಿವೆ. ಆದರೆ, ಆಂಜಿ ಯಾವ ಕಾರಣಕ್ಕೆ ಅಲ್ಲಿಗೆ ಹೋದರು ಎಂಬುದು ಗೊತ್ತಿಲ್ಲ ಎಂದು ಕೆಲ ಅಧಿಕಾರಿಗಳು ಹೇಳುತ್ತಿದ್ದಾರೆ. ಉದ್ಯಾನದಲ್ಲಿ ಪ್ರಾಣಿಗಳ ಸಾವು, ಮನುಷ್ಯರ ಮೇಲೆ ಪ್ರಾಣಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

‘ಕ್ರೂರ ಪ್ರಾಣಿಗಳಿಗೆ ಮಾಂಸ ಹಾಕುವಾಗ ಉದ್ಯಾನದ ಅಧಿಕಾರಿಗಳು ಸ್ಥಳದಲ್ಲಿರಬೇಕು. ಆದರೆ, ಶನಿವಾರ ಅವಘಡ ಸಂಭವಿಸಿದಾಗ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿರಲಿಲ್ಲ. ಈ ಬಗ್ಗೆ ಕೇಳಿದರೆ, ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ’ ಎಂದು ಪ್ರಜಾ ಪರಿವರ್ತನಾ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಮಹದೇವಪ್ಪ ಆರೋಪಿಸಿದರು.

‘ಉದ್ಯಾನದ ಎಲ್ಲ ಕೆಲಸಗಾರರಿಗೆ ಬುಲೆಟ್‌ಪ್ರೂಫ್ ಜಾಕೆಟ್ ಹಾಗೂ ವಾಕಿಟಾಕಿ ನೀಡಬೇಕು. ತುರ್ತು ಸಂದರ್ಭದಲ್ಲಿ ಇವುಗಳು ಕೆಲಸಗಾರರ ಪ್ರಾಣ ಉಳಿಸುತ್ತವೆ. ಜತೆಗೆ ಉದ್ಯಾನದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಒತ್ತಾಯಿಸಿದರು.

ಹಿಂದಿರುಗಿದ ಪ್ರವಾಸಿಗರು: ಪ್ರತಿಭಟನೆ ಪರಿಣಾಮವಾಗಿ ಮಧ್ಯಾಹ್ನ 12.30ರ ವರೆಗೆ ಉದ್ಯಾನದ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರಾಣಿ–ಪಕ್ಷಿಗಳ ವೀಕ್ಷಣೆಗೆ ಬಂದಿದ್ದ ನೂರಾರು ಪ್ರವಾಸಿಗರು ನಿರಾಸೆಯಿಂದ ಹಿಂದಿರುಗಿದರು.

‘ಪ್ರತಿಭಟನೆ ಬಗ್ಗೆ ಮಾಹಿತಿ ಇರಲಿಲ್ಲ. ಮಕ್ಕಳೊಂದಿಗೆ ಉದ್ಯಾನಕ್ಕೆ ಬಂದಿದ್ದೇವೆ. ಈಗ ಉದ್ಯಾನ ಬಂದ್ ಮಾಡಿದ್ದಾರೆ. ಬೇರೆ ದಾರಿಯಿಲ್ಲದೆ ಮರಳುತ್ತಿದ್ದೇವೆ’ ಎಂದು ಪ್ರವಾಸಿಗರೊಬ್ಬರು ತಿಳಿಸಿದರು.

ಹುಲಿ ದಾಳಿಯ ವಿಡಿಯೊ ಡಿಲಿಟ್
‘ಹುಲಿಗಳು ಆಂಜಿ ಮೇಲೆ ದಾಳಿ ಮಾಡಿದ್ದನ್ನು ಕೆಲಸಗಾರರು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದರು. ಈ ಬಗ್ಗೆ ತಿಳಿದ ಅಧಿಕಾರಿಗಳು ಅವರ ಮೊಬೈಲ್‌ಗಳನ್ನು ಪರಿಶೀಲಿಸಿ ಅವುಗಳಲ್ಲಿದ್ದ ವಿಡಿಯೊಗಳನ್ನು ಡಿಲಿಟ್ ಮಾಡಿದ್ದಾರೆ’ ಎಂದು ಉದ್ಯಾನದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

₹ 5 ಲಕ್ಷ ಪರಿಹಾರ ವಿರತಣೆ
ಪ್ರತಿಭಟನಾ ಸ್ಥಳಕ್ಕೆ ಬಂದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಅವರು ಪ್ರತಿಭಟನಾಕಾರರ ಮನವೊಲಿಸಿ ಮೃತರ ಕುಟುಂಬಸ್ಥರಿಗೆ ₹ 5 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್, ‘ಬೋನುಗಳಿಗೆ ಹೋಗಲು ಸಿಬ್ಬಂದಿಗೆ ಪ್ರತ್ಯೇಕ ಮಾರ್ಗವಿರುತ್ತದೆ. ಆ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದ ಮೂಲಕ ಆಂಜಿ ಬೋನಿನೊಳಗೆ ಪ್ರವೇಶಿಸಿದ್ದರಿಂದ ಅವಘಡ ಸಂಭವಿಸಿದೆ’ ಎಂದರು.

‘ಇನ್ನೂ ₹ 5 ಲಕ್ಷ ಪರಿಹಾರ ನೀಡುತ್ತೇವೆ. ಎರಡು ದಿನಗಳಲ್ಲಿ ಬಾಕಿ ಹಣವನ್ನು ಮೃತರ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆಂಜಿ ಅವರ ಮಗ ದೇವರಾಜ್‌ಗೆ ಉದ್ಯಾನದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡುತ್ತೇವೆ’ ಎಂದು ತಿಳಿಸಿದರು.

‘ಘಟನೆ ಬಗ್ಗೆ ತನಿಖೆ ನಡೆಸುತ್ತೇವೆ. ವರದಿ ಬಂದ ಬಳಿಕ ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹೇಳಿದರು.

‘ಹಣ, ಉದ್ಯೋಗ ನೀಡಿದರೆ ತಂದೆ ವಾಪಾಸ್ ಬರಲ್ಲ’
ಬೆಂಗಳೂರು:
‘ನನ್ನ ತಂದೆಯೇ ನನಗೆ ಎಲ್ಲವೂ ಆಗಿದ್ದರು. ಹಣ ಹಾಗೂ ಉದ್ಯೋಗ ನೀಡಿದ ಮಾತ್ರಕ್ಕೆ ನನ್ನ ತಂದೆ ವಾಪಸ್ ಬರಲ್ಲ’....
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಶನಿವಾರ ಹುಲಿಗಳ ದಾಳಿಯಿಂದ ಮೃತಪಟ್ಟ ಆಂಜಿ ಅವರ ಮಗ ದೇವರಾಜ್(19) ಅವರ ಆಕ್ರೋಶದ ನುಡಿಗಳಿವು.

‘ಅವರು ಮನೆಯ ಆಧಾರ ಸ್ತಂಭವಾಗಿದ್ದರು. ಈಗ ಅವರೂ ಇಲ್ಲವಾಗಿದ್ದಾರೆ. ಉದ್ಯೋಗ ಅರಸಿ ರಾಮನಗರದಿಂದ ಬಂದು ಹಕ್ಕಿಪಿಕ್ಕಿ ಕಾಲೊನಿಯಲ್ಲಿ ವಾಸವಿದ್ದೆವು. ಅವರೇ ಇಲ್ಲದ ಮೇಲೆ ನಮಗೆ ಯಾರು ದಿಕ್ಕು’ ಎಂದು ಕಣ್ಣೀರಿಟ್ಟರು.

‘ಶನಿವಾರ ಸಂಜೆ ಉದ್ಯಾನಕ್ಕೆ ಭೇಟಿ ನೀಡಿ ಅಪ್ಪನ ಸಹೋದ್ಯೋಗಿಗಳನ್ನು ಮಾತನಾಡಿಸಿಕೊಂಡು ಪ್ರಾಣಿಗಳನ್ನು ವೀಕ್ಷಿಸಿ ಬಂದಿದ್ದೆ. ಕೆಲ ಹೊತ್ತಿನಲ್ಲೇ ಅವರ ಸ್ನೇಹಿತರು ಕರೆ ಮಾಡಿ ವಿಷಯ ತಿಳಿಸಿದರು. ಬಳಿಕ ದಿಕ್ಕು ತೋಚದಂತಾಗಿದೆ’ ಎಂದು ಹೇಳಿದರು.

ಹಿಂದೆ ನಡೆದ ಪ್ರಾಣಿ ದಾಳಿ ವಿವರ
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗೆ ನಿರ್ಲಕ್ಷ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.

ನವೆಂಬರ್, 2007: ಹೆಣ್ಣು ಹಾಗೂ ಗಂಡು ಆನೆಗಳನ್ನು ಪ್ರತ್ಯೇಕ ಮಾಡುವ ಸಂದರ್ಭದಲ್ಲಿ ಆನೆಯೊಂದು ಪಶುವೈದ್ಯ ವಿಶ್ವನಾಥ್ ಮೇಲೆ ದಾಳಿ ಮಾಡಿತ್ತು.

ಮಾರ್ಚ್, 2015: ಬಂಗಾಳ ಹುಲಿಗಳು ಪ್ರಾಣಿಪಾಲಕ ಕೃಷ್ಣ ಎಂಬುವರ ಮೇಲೆ ಎರಗಿ ಅವರ ಕೈಯನ್ನು ಗಂಭೀರವಾಗಿ ಗಾಯಗೊಳಿಸಿದ್ದವು.

ಜುಲೈ, 2017: ಸುಂದರ್ ಎಂಬ ಒಂಟಿ ಸಲಗವು ಅಭಿಲಾಷಾ(27) ಎಂಬುವರನ್ನು ಕೊಂದಿತ್ತು.

ಸೆಪ್ಟೆಂಬರ್ 2017: ಬಂಗಾಳ ಹುಲಿಗಳ ಜತೆ ಕಿತ್ತಾಡಿ ಬಿಳಿ ಹುಲಿ ಸಾವು

*ವಿದೇಶದಿಂದ ತರಿಸಿದ್ದ ಗರ್ಭಿಣಿ ಜೀಬ್ರಾ ಗುಂಡಿಯಲ್ಲಿ ಬಿದ್ದು ಕೆಲ ದಿನಗಳ ಹಿಂದೆ ಮೃತಪಟ್ಟಿತ್ತು.

*ಹಿಂದೆ ಸಫಾರಿಯಲ್ಲಿ ಸಿಬ್ಬಂದಿಯ ಮೇಲೆರಗಿದ್ದ ಕಾಡುಕೋಣ ಕಾವಲುಗಾರನನ್ನು ಕೊಂದಿತ್ತು.

*ಚಿರತೆ ಹಾಗೂ ಕರಡಿ ಮೃತಪಟ್ಟಿದ್ದವು‌.

*
ಉದ್ಯಾನದ ನಿಯಮಗಳ ಪ್ರಕಾರ ಅನುಭವಿ ಕೆಲಸಗಾರರನ್ನು ಮಾತ್ರ ಕ್ರೂರ ಪ್ರಾಣಿಗಳ ಸಫಾರಿ ಬಳಿ ಕೆಲಸಕ್ಕೆ ನಿಯೋಜಿಸಬೇಕು. ಆದರೆ, ಆಂಜಿಗೆ ಹುಲಿ ಬೋನಿನ ಬಗ್ಗೆಯಾಗಲಿ, ಹುಲಿಗಳ ಬಗ್ಗೆಯಾಗಲಿ ಅರಿವಿರಲಿಲ್ಲ.
–ಉದ್ಯಾನದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.