ADVERTISEMENT

`ಹಂಸಧ್ವನಿ' ಮುಚ್ಚಲು ಆದೇಶ: `ಮಾತು' ಕಳೆದುಕೊಂಡ ಮಕ್ಕಳು!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST
ಶಾಲೆಯ ವಿಶೇಷ ಸಮಸ್ಯೆ ಇರುವ ಮಕ್ಕಳು. ಪ್ರಜಾವಾಣಿ ಚಿತ್ರ: ರಂಜು.ಪಿ
ಶಾಲೆಯ ವಿಶೇಷ ಸಮಸ್ಯೆ ಇರುವ ಮಕ್ಕಳು. ಪ್ರಜಾವಾಣಿ ಚಿತ್ರ: ರಂಜು.ಪಿ   

ಬೆಂಗಳೂರು:  ರಾಜ್ಯ ಸರ್ಕಾರದ ಅನುದಾನಕ್ಕೆ ಒಳಪಟ್ಟು ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸು ತ್ತಿರುವ ಇಂದಿರಾನಗರದ ಕಿವುಡ, ಮೂಗ ಮತ್ತು ಬುದ್ಧಿಮಾಂದ್ಯ ಮಕ್ಕಳ `ಹಂಸಧ್ವನಿ' ಶಾಲೆಯ ಮಾನ್ಯತೆ ರದ್ದಾಗಿರುವ ಕಾರಣ, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿ ಇದೆ.

ಶಾಲೆಯು ನಿಯಮಾನುಸಾರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಶಾಲೆಯ ಮಾನ್ಯತೆಯನ್ನೇ ರದ್ದುಮಾಡಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ತಾತ್ಕಾಲಿಕ ತಡೆಯಾಜ್ಞೆ ಸಿಕ್ಕಿದ್ದು, ಭವಿಷ್ಯದಲ್ಲಿ ಏನಾಗಲಿದೆಯೋ ಎಂಬ ಆತಂಕ ಮಡುಗಟ್ಟಿದೆ.

ಶಾಲೆಯಲ್ಲಿ ಒಟ್ಟು 68 ಮಕ್ಕಳು ಹಾಗೂ 12 ಶಿಕ್ಷಕರು ಇದ್ದಾರೆ. ಶಾಲೆಯ ಕೊಠಡಿಗಳ ಸುಣ್ಣ ಬಣ್ಣ ಮಾಸಿದ್ದು, ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಶೌಚಾಲಯದ ಬಾಗಿಲು ಮುರಿದು ಹೋಗಿದ್ದು, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಶಾಲೆಯ ವಾತಾವರಣ ಮಕ್ಕಳ ಕಲಿಕೆ ಮತ್ತು ವಿಕಾಸಕ್ಕೆ ಪೂರಕವಾಗಿ ಇರದೆ, ಮಕ್ಕಳ ಬಗೆಗಿನ ಸಂಸ್ಥೆ ಅಥವಾ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುವಂತಿದೆ.

ಬಹುತೇಕ ಮಕ್ಕಳ ಪೋಷಕರು ಬಡವರಾಗಿದ್ದು, ಕೂಲಿನಾಲಿ ಮಾಡಿ ಜೀವನ ಸಾಗಿಸುವವರು. ಬೆಳಿಗ್ಗೆ 9.30ಕ್ಕೆ ಮಕ್ಕಳನ್ನು ಶಾಲೆಗೆ ಕರೆತರುವ ಪೋಷಕರು ಮಧ್ಯಾಹ್ನ 3.30ರವರೆಗೂ ಅಲ್ಲಿಯೇ ಕಾದು ಪಾಠ ಮುಗಿದ ಬಳಿಕ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೌಲಭ್ಯದಿಂದಲೂ ವಂಚಿತರಾಗಿದ್ದು, ಮನೆ ಯಿಂದಲೇ ಊಟ ತರಬೇಕಾದಸ್ಥಿತಿ ಇದೆ.

ಸಂಸ್ಥೆಯ ಹಿನ್ನೆಲೆ: ನ್ಯಾಶಿಯೋ ಸಂಸ್ಥೆಯ, ಸ್ವತಃ ಅಂಗವಿಕಲರಾಗಿದ್ದ ಲಕ್ಷ್ಮೀ ಆರ್. ನಿಜಾಮುದ್ದೀನ್ ಅವರು ಸಾಮಾಜಿಕ ಕಳಕಳಿಯಿಂದ 1976ರಲ್ಲಿ ಶಾಲೆ ಸ್ಥಾಪಿಸಿ, ಕರ್ನಾಟಕ ಸಂಘಗಳ ಅಧಿನಿಯಮ 1960ರಂತೆ ಸಂಸ್ಥೆಯನ್ನು ನೋಂದಣಿ ಮಾಡಿಸಿದ್ದರು. ಶಾಲೆಯು 1982ರಿಂದ ರಾಜ್ಯ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. 1989ರಿಂದ ಇಲ್ಲಿವರೆಗೆ ಸಂಸ್ಥೆಯ ನೋಂದಣಿ ನವೀಕರಣ ಆಗಿಲ್ಲ. ಇದ್ಯಾವುದನ್ನೂ ಪರಿಶೀಲಿಸದೆ 2004-05ರವರೆಗೆ ರಾಜ್ಯ ಸರ್ಕಾರ, ನಂತರದಲ್ಲಿ ಜಿಲ್ಲಾ ಪಂಚಾಯ್ತಿ ಅನುದಾನ ಬಿಡುಗಡೆ ಮಾಡಿವೆ.

ಸಂಸ್ಥೆಯಲ್ಲಿ ಭ್ರಷ್ಟಾಚಾರ: ಈ ನಡುವೆ ಸಂಸ್ಥೆಯು ಸರ್ಕಾರದ ಅನುದಾನ ಹಾಗೂ ಸಾರ್ವಜನಿಕರ ದೇಣಿಗೆಯನ್ನು ದುರುಪ ಯೋಗ ಮಾಡಿ ಕೊಂಡಿರುವ ಬಗ್ಗೆ ಶಾಲೆಯ ಶಿಕ್ಷಕರು ಮತ್ತು ಪೋಷಕರಿಂದ ದೂರುಗಳು ಬಂದಿದ್ದವು. ಈ ಕುರಿತು ಸ್ವಯಂ ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಿದ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತರು ಅನುದಾನದ ದುರ್ಬಳಕೆಗೆ ಕಾರಣರಾಗಿದ್ದ ಮುಖ್ಯೋ ಪಾಧ್ಯಾಯಿನಿ ರಾಧಾಮಣಿ ಹಾಗೂ ಡಿ. ನಿರ್ಮಲಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಶಿಫಾರಸು ಮಾಡಿದ್ದರು.

ಅಲ್ಲದೇ ಸಂಸ್ಥೆಯು ಕಾಯ್ದೆಯಲ್ಲಿ ಹೇಳಿರುವಂತೆ ನವೀಕರಣ ಮಾಡಿಕೊಳ್ಳದೆ ಬೇಜವಾಬ್ದಾರಿ ತೋರಿರುವುದರಿಂದ ಸಂಸ್ಥೆಯ ಮಾನ್ಯತೆ ರದ್ದುಮಾಡಬೇಕು. ಶಾಲೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಸಿಬ್ಬಂದಿ ಮತ್ತು ಶಾಲೆ ನಿರ್ವಹಣೆಗಾಗಿ ವಿಶೇಷ ಶಿಕ್ಷಣದಲ್ಲಿ ತರಬೇತಿಗೊಂಡ ಉನ್ನತ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ಕೂಡಲೇ ನೇಮಕ ಮಾಡಬೇಕೆಂದೂ ಆಗ್ರಹಿಸಿದ್ದರು. ಶಿಕ್ಷಕರ ವೇತನವನ್ನೂ ತಡೆಹಿಡಿಯಲಾಗಿತ್ತು.

ಗಾಯದ ಮೇಲೆ ಬರೆ: ಬಳಿಕ ಶಿಕ್ಷಕರು ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರ ಗಳಿಗೂ ನಮಗೂ ಸಂಬಂಧವಿಲ್ಲ. ಕೂಡಲೇ ವೇತನ ಬಿಡುಗಡೆ ಮಾಡಬೇಕು, ಶಾಲೆ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು, ಆಡಳಿತಾಧಿಕಾರಿ ನೇಮಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 6 ವಾರದಲ್ಲಿ ಇತ್ಯರ್ಥಪಡಿಸಲು ಇಲಾಖೆಗೆ ಸೂಚನೆ ನೀಡಿತ್ತು.

ಈ ಕುರಿತು ಸಭೆ ನಡೆಸಿದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆಯುಕ್ತರ ಶಿಫಾರಸುಗಳು, ನ್ಯಾಯಾಲಯದ ಸೂಚನೆ ಯಾವುದನ್ನೂ ಪರಿಗಣಿಸದೆ ಶಾಲೆ ಮುಚ್ಚುವುದಾಗಿ ಆದೇಶ ಹೊರಡಿಸಿದೆ. ಸಂಸ್ಥೆ ನಿಯಮಗಳಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸದ ಕಾರಣ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.

`ನನ್ನ ಪತಿ ಗಾರೆ ಕೆಲಸ ಮಾಡುತ್ತಾರೆ. ನಮಗೆ ಎರಡು ಮಕ್ಕಳಿದ್ದು, ಇಬ್ಬರೂ ಬುದ್ಧಿಮಾಂದ್ಯರು. ಕಳೆದ ಐದು ವರ್ಷಗಳಿಂದ ಶಾಲೆಗೆ ಕರೆತರುತ್ತಿದ್ದೇನೆ. ಶಾಲೆಗೆ ಬಂದ ನಂತರ ಮಕ್ಕಳಲ್ಲಿ ಉತ್ತಮ ಬೆಳವಣಿಗೆ ಇದೆ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಶಾಲೆ ಮನೆಗೆ ಹತ್ತಿರ ಇರುವುದರಿಂದ ಬಂದು ಹೋಗಲು ಅನುಕೂಲವಿದೆ. ಯಾರೋ ಮಾಡಿದ ತಪ್ಪಿಗೆ ನಮ್ಮ ಮಕ್ಕಳಿಗೆ ಶಿಕ್ಷೆ ನೀಡುವುದು ಸರಿಯಲ್ಲ' ಎಂದು ಪೋಷಕಿ ಜ್ಯೋತಿ `ಪ್ರಜಾವಾಣಿ'ಯೊಂದಿಗೆ ಅಳಲು ತೋಡಿ ಕೊಂಡರು.

`ಶಾಲೆ ಮುಚ್ಚಲಾಗುವುದು. ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಬುಧವಾರ ಮತ್ತು ಗುರುವಾರ ಪೋಷಕರ ಕೌನ್ಸೆಲಿಂಗ್ ನಡೆಯಲಿದೆ. ತಪ್ಪದೇ ಹಾಜರಾಗಬೇಕು ಎಂದು ನಮಗೆಲ್ಲಾ ನೋಟಿಸ್ ಕಳುಹಿಸಲಾಗಿತ್ತು. ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದೇವೆ. ಆದರೆ ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರದ ಕಾರಣ ಶಾಲೆಗೆ ಕರೆತರುವುದನ್ನೇ ನಿಲ್ಲಿಸಿದ್ದಾರೆ.

  ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಏಕೆ ಬರೆ ಎಳೆಯಬೇಕು. ನಾವೆಲ್ಲಾ ಕೂಲಿ ಮಾಡಿ ಬದುಕುವವರಾಗಿದ್ದು, ಮಕ್ಕಳ ಪಾಲಿಗೆ ಶಿಕ್ಷಣವೇ ಆಸ್ತಿ.ಆದಕಾರಣ ಸರ್ಕಾರವೇ ನೇರವಾಗಿ ಶಾಲೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಮುಖ್ಯಮಂತ್ರಿ ಅವರು ಈ ಬಗ್ಗೆ ಗಮನ ಹರಿಸಬೇಕು' ಎಂದು ನೊಂದ ಪೋಷಕರಾದ ಮಂಜುಳಾ, ಸುನೀತಾ ಮತ್ತಿತರರು ಮನವಿ ಮಾಡಿದರು.

ADVERTISEMENT

ಕೂಡಲೇ ವೇತನ ಬಿಡುಗಡೆ ಮಾಡಲಿ
`ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಮಕ್ಕಳಿಗೆ ಪಾಠದ ಜೊತೆ ಕ್ರೀಡೆ, ಸಾಂಸ್ಕೃತಿಕ, ಕ್ರಿಯಾಶೀಲ ಕಾರ್ಯಕ್ರಮಗಳಲ್ಲಿ ತೊಡಗಿಸಿದ್ದೇವೆ. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಯುವ ಪಥ ಸಂಚಲನದಲ್ಲಿ ಈ ಮಕ್ಕಳೂ ಭಾಗವಹಿಸುತ್ತಾ ಬಂದಿದ್ದಾರೆ. ಹೈದರಾಬಾದಿನಲ್ಲಿ ನಡೆದ ಟಿ-20 ಕ್ರಿಕೆಟ್, ಜೆಮ್‌ಶೆಡ್‌ಪುರದಲ್ಲಿ ನಡೆದ ನ್ಯಾಷನಲ್ ಅಥ್ಲೆಟಿಕ್ ಮೀಟ್‌ನಲ್ಲಿ ಬಹುಮಾನ ಗಳಿಸಿದ್ದಾರೆ.

ಹಳೆಯ ವಿದ್ಯಾರ್ಥಿಗಳಲ್ಲಿ ಕೆಲವರು ಉತ್ತಮ ಸಾಧನೆ ಮಾಡಿದ್ದಾರೆ. ಮಕ್ಕಳು ಮತ್ತು ಶಾಲೆಯೊಂದಿಗಿನ ಭಾವನಾತ್ಮಕ ಸಂಬಂಧದಿಂದ 2011ರಿಂದ ಸಂಬಳವನ್ನು ನೀಡಿರದಿದ್ದರೂ ಪಾಠ ಮಾಡುತ್ತಾ ಬಂದಿದ್ದೇವೆ. ಸಂಬಳ ವಿಲ್ಲದೆ ಮಕ್ಕಳ ಓದು, ಕುಟುಂಬ ನಿರ್ವಹಣೆ ಹೊರೆ ಯಾಗಿದೆ. ಮನೆ ಪತ್ರ, ಒಡವೆಗಳನ್ನು ಅಡವಿಟ್ಟು ಜೀವನ ನಡೆಸುತ್ತಿದ್ದೇವೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು. ಶಾಲೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು.
-ನಫೀಸಾ ಸುಲ್ತಾನ, ಶಿಕ್ಷಕಿ, ಶಿವಣ್ಣ, ದೈಹಿಕ ಶಿಕ್ಷಕ .

ಶಾಲೆ ಮುಚ್ಚುವುದು ಸರಿಯಲ್ಲ
`ರಾಜ್ಯದಲ್ಲಿ ಬಹುತೇಕ ಶಾಲೆಗಳನ್ನು ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತವೆ. ಸರ್ಕಾರದಿಂದ ನಡೆಯುತ್ತಿ ರುವ ಶಾಲೆಗಳು ಕೇವಲ 8. ಆದರೆ ಕೇರಳದಲ್ಲಿ 360, ಮಹಾರಾಷ್ಟ್ರದಲ್ಲಿ 940 ಶಾಲೆಗಳು ಸರ್ಕಾರದಿಂದಲೇ ಸ್ಥಾಪನೆಯಾಗಿವೆ. ಸ್ವಯಂಸೇವಾ ಸಂಸ್ಥೆಗಳಿಂದ ಶಾಲೆಗಳ ನಿರ್ವಹಣೆ ಸರಿಯಾಗಿ ನಡೆಯದೇ ಇದ್ದಲ್ಲಿ ಸರ್ಕಾರ ಅನುಸರಿ ಸಬಹುದಾದ ನಿಯಮಗಳಿವೆ. ಆದರೆ, ಇದ್ಯಾವು ದನ್ನೂ ಅನುಸರಿಸದೆ ಏಕಾಏಕಿ ಶಾಲೆಯ ಮಾನ್ಯತೆ ರದ್ದು ಮಾಡಿರುವುದರಿಂದ ಮಕ್ಕಳಿಗೆ ಅನ್ಯಾಯವಾಗಿದೆ.

ಲಕ್ಷ್ಮೀ ಆರ್. ನಿಜಾಮುದ್ದೀನ್ ಅವರು ಅಂಗವಿಕಲರ ಮೇಲಿನ ಕಾಳಜಿಯಿಂದ ಸಂಘ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ ತ್ಯಾಗ ಮತ್ತು ಪ್ರಾಮಾಣಿಕತೆಯಿಂದ ಶಾಲೆ ಕಟ್ಟಿದ್ದಾರೆ. ಈಗ ಅವರು ಇಲ್ಲ. 1989ರಿಂದ ಸಂಸ್ಥೆಯ ನವೀಕರಣ ಆಗಿರದಿದ್ದರೂ, ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ದೂರುಗಳಿದ್ದರೂ ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಅಕ್ರಮಗಳಿಗೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ನೆಪದಲ್ಲಿ ಶಾಲೆ ಮುಚ್ಚುವುದು ಸರಿಯಲ್ಲ. ಲಕ್ಷ್ಮೀ ನಿಜಾಮುದ್ದೀನ್ ಅವರ ಕಾಳಜಿ ಅರಿತು ಶಾಲೆ ಮುನ್ನಡೆಸುವುದು ಸರ್ಕಾರದ ಆದ್ಯ ಕರ್ತವ್ಯ.
-ಕೆ.ವಿ.ರಾಜಣ್ಣ, ರಾಜ್ಯ ಆಯುಕ್ತ, ಅಂಗವಿಕಲ ವ್ಯಕ್ತಿಗಳ ಅಧಿನಿಯಮ .

ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ ಇಲ್ಲ
ಶಾಲೆಯ ಮಾನ್ಯತೆ ರದ್ದುಮಾಡಿ ಆದೇಶ ಹೊರಡಿಸಿರುವುದು ಸರಿ ಇದೆ. ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಶಾಲೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು, ಆಡಳಿತಾಧಿಕಾರಿ ನೇಮಕ ಮಾಡಲು ಅನುದಾನಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಅವಕಾಶ ಇಲ್ಲ.

ಮಕ್ಕಳಿಗೆ ತೊಂದರೆ ಆಗದಿರಲಿ ಎಂದು ಬೇರೆ ಶಾಲೆಗಳಿಗೆ ದಾಖಲು ಮಾಡುವ ಬಗ್ಗೆ ಪೋಷಕರಿಗೆ ನೋಟಿಸ್ ನೀಡಲಾಗಿತ್ತು.ಸದ್ಯ ಆದೇಶಕ್ಕೆ ತಡೆಯಾಜ್ಞೆ ಇದ್ದು, ಮುಂಬರುವ ದಿನಗಳಲ್ಲಿ ನ್ಯಾಯಾಲಯ ನೀಡುವ ತೀರ್ಪಿನ ಅನುಸಾರ ಕ್ರಮ ಕೈಗೊಳ್ಳಲಾಗುವುದು.
-ಜಯವಿಭವ ಸ್ವಾಮಿ, ನಿರ್ದೇಶಕ, ಅಂಗವಿಕಲರ ಹಾಗೂಹಿರಿಯ ನಾಗರಿಕರ ಸಬಲೀಕರಣ ಇಲಾಖೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.