ADVERTISEMENT

ಹಕ್ಕುಪತ್ರ ವಿತರಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:55 IST
Last Updated 26 ಅಕ್ಟೋಬರ್ 2011, 19:55 IST

ಬೆಂಗಳೂರು:  `ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲವು ಕೊಳೆಗೇರಿಗಳ ನಿವಾಸಿಗಳಿಗೆ ಶೀಘ್ರವಾಗಿ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದರು.

ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಮಂಗಳವಾರ ಶಾಸಕ ಎನ್.ಎ. ಹ್ಯಾರಿಸ್ ಅವರೊಂದಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ನಂತರ ಅವರು ಮಾತನಾಡಿದರು.

`ಕೊಳೆಗೇರಿ ನಿವಾಸಿಗಳು ಹಕ್ಕುಪತ್ರ ಪಡೆಯಲು ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಇತರೆ ದಾಖಲೆಗಳನ್ನು ನೀಡುವಂತೆ ಕೊಳಚೆ ನಿರ್ಮೂಲನಾ ಮಂಡಳಿ ಸೂಚಿಸಿರುವುದರಿಂದ ಹಲವರಿಗೆ ಹಕ್ಕುಪತ್ರ ನೀಡಿಲ್ಲ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಮಂಡಳಿ ಆಯುಕ್ತರನ್ನು ಭೇಟಿ ಮಾಡಿ, ಕೆಲವು ದಾಖಲೆಗಳಿಗೆ ವಿನಾಯಿತಿ ಪಡೆದು ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ~ ಎಂದರು.

`ವಾಹನ ದಟ್ಟಣೆ ಹೆಚ್ಚಾಗಿರುವ ನಾಲ್ಕು ಸ್ಥಳಗಳಲ್ಲಿ ಪಾದಚಾರಿ ಮೇಲು ಸೇತುವೆ ನಿರ್ಮಿಸುವಂತೆ ಸ್ಥಳೀಯರು ಕೋರಿದ್ದು, ಈ ಸಂಬಂಧ ಪ್ರಸ್ತಾವವನ್ನು ಪಾಲಿಕೆಯ ಸಭೆಗೆ ಸಲ್ಲಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ~ ಎಂದು ಹೇಳಿದರು.

`ಈ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗದಂತೆ ತಡೆಯುವ ನಿಟ್ಟಿನಲ್ಲಿ ಮಳೆ ನೀರು ಕಾಲುವೆಯ ಹೂಳು ತೆರವುಗೊಳಿಸಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.