ADVERTISEMENT

ಹದಗೆಟ್ಟ ಪಣತ್ತೂರು- ಬಳಗೆರೆ ರಸ್ತೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2012, 20:08 IST
Last Updated 26 ನವೆಂಬರ್ 2012, 20:08 IST

ಮಹದೇವಪುರ: ಕ್ಷೇತ್ರದ ಪಣತ್ತೂರು ಗ್ರಾಮದ ಬಳಿ ರೈಲ್ವೆ ಮಾರ್ಗದ ಕೆಳಗಿರುವ ಪಣತ್ತೂರು-ಬಳಗೆರೆ ಮುಖ್ಯ ರಸ್ತೆ ಆರೇಳು ತಿಂಗಳುಗಳಿಂದ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.

ಜತೆಗೆ ರೈಲ್ವೆ ಮಾರ್ಗದ ಕೆಳಗೆ ರಸ್ತೆಯಲ್ಲಿ ದೊಡ್ಡ ಗುಂಡಿವೊಂದು ನಿರ್ಮಾಣಗೊಂಡಿದೆ. ಗುಂಡಿಗೆ ಊರಿನ ಚರಂಡಿ ನೀರು ಬಂದು ಸೇರುತ್ತಿದೆ. ಒಂದು ತಿಂಗಳಿಂದ ಪಣತ್ತೂರು ದಿನ್ನೆಯ ಸಮೀಪದಲ್ಲಿರುವ ಕೆರೆಯ ನೀರು ಸಹ ಬಂದು ಸೇರುತ್ತಿದೆ. ಹೀಗಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. 

ರಸ್ತೆಯ ನಡುವಿನ ಗುಂಡಿಯ ಆಳ ಸುಮಾರು ಎರಡರಿಂದ ಮೂರು ಅಡಿಗಳಷ್ಟಿದೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಸರಾಗವಾಗಿ ಹೋಗಲು ಆಗುತ್ತಿಲ್ಲ. ಪಾದಚಾರಿಗಳಂತೂ ನಡೆದುಕೊಂಡು ಹೋಗಲು ಸಾಧ್ಯವೇ ಇಲ್ಲದಂತಾಗಿದೆ. ಜನರು ರಸ್ತೆಯ ಮೇಲೆ ಇರುವ ರೈಲ್ವೆ ಮಾರ್ಗವನ್ನು ಹತ್ತಿ ಇಳಿದು ಹೋಗುತ್ತಿದ್ದಾರೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ. ಪ್ರತಿನಿತ್ಯ ಅನೇಕ ವಾಹನಗಳು ರಸ್ತೆಯ ಮಧ್ಯದ ಗುಂಡಿಯಲ್ಲಿ ಸಿಕ್ಕಿ ಹಾಕಿಕೊಂಡು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ.

ನಿತ್ಯವೂ ಸಾವಿರಾರು ವಾಹನಗಳು ಓಡಾಡುವ ಪಣತ್ತೂರು - ಬಳಗೆರೆ ಮುಖ್ಯರಸ್ತೆಯು ಹತ್ತಿರದ ವರ್ತೂರು, ಗುಂಜೂರುಪಾಳ್ಯ, ಪಣತ್ತೂರುದಿನ್ನೆ ಊರುಗಳಿಗೆ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆ ಸರ್ಜಾಪುರ ಮುಖ್ಯರಸ್ತೆಗೂ ಗುಂಜೂರು ಮಾರ್ಗವಾಗಿ ಸಂಪರ್ಕ ಕಲ್ಪಿಸುತ್ತದೆ.

`ಈ ರಸ್ತೆಯನ್ನು ನಾಲ್ಕೈದು ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ರಸ್ತೆ ದುರಸ್ತಿಗೊಂಡ ಒಂದೇ ವರ್ಷದಲ್ಲಿ ಹದಗೆಟ್ಟು ಹೋಗಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಸ್ಥಳೀಯರು ದೂರಿದ್ದಾರೆ. 

`ಪಣತ್ತೂರು - ಬಳಗೆರೆ ಮುಖ್ಯ ರಸ್ತೆಯಲ್ಲಿರುವ ಗುಂಡಿಯನ್ನು ಕೂಡಲೇ ದುರಸ್ತಿ ಮಾಡಬೇಕು. ಗುಂಡಿಯತ್ತ ಹರಿದು ಬರುವ ಚರಂಡಿ ನೀರಿಗೆ ವಿರಾಮ ಹಾಕಬೇಕು. ರಸ್ತೆಯನ್ನು ಡಾಂಬರೀಕರಣ ಮಾಡಬೇಕು' ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.