ADVERTISEMENT

ಹದಗೆಟ್ಟ ರಸ್ತೆ: ನಿಂದನೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಬೆಂಗಳೂರು: ಬೆಂಗಳೂರಿನ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಫಲವಾಗಿದೆ ಎಂಬ ಆರೋಪ ಈಗ ಹೈಕೋರ್ಟ್ ಅಂಗಳಕ್ಕೆ ಬಂದಿದೆ. ನಗರದ ರಸ್ತೆಗಳ ದುರವಸ್ಥೆ ಕುರಿತು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಅವರು ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕೆ. ಪಾಟೀಲ ಮತ್ತು ಬಿ. ಮನೋಹರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಹಾಗೂ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಅವರಿಗೆ ತುರ್ತು ನೋಟಿಸ್ ಜಾರಿಗೆ ಬುಧವಾರ ಆದೇಶಿಸಿದೆ.

`ನಗರದ ರಸ್ತೆಗಳ ದುರವಸ್ಥೆ ಕುರಿತು ಮಾಧ್ಯಮಗಳಲ್ಲಿ ಕಳೆದ ಕೆಲವು ತಿಂಗಳಿನಿಂದ ವರದಿಗಳು ಪ್ರಕಟವಾಗುತ್ತಿವೆ. ಕೆಟ್ಟಿರುವ ರಸ್ತೆಗಳ ಕಾರಣ ಅಪಘಾತಗಳೂ ಸಂಭವಿಸಿವೆ. ನಗರದ ರಸ್ತೆಗಳು ಸರಿಯಾಗಿಲ್ಲ ಎಂದು 2004ರಲ್ಲಿ ಸಾವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಆಗ ಕ್ಯಾಪ್ಟನ್ ರಾಜಾರಾವ್ ನೇತೃತ್ವದಲ್ಲಿ ಸಮಿತಿ ರಚಿಸಿದ ಹೈಕೋರ್ಟ್, ಭಾರತೀಯ ರಸ್ತೆ ಕಾಂಗ್ರೆಸ್‌ನ ನಿಯಮಗಳಿಗೆ ಅನುಗುಣವಾಗಿ ಇಲ್ಲಿನ ರಸ್ತೆಗಳು ಇವೆಯೇ ಎಂಬುದನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿತ್ತು' ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ರಸ್ತೆಗಳ ಸುಧಾರಣೆಗೆ ಸಮಿತಿಯು ಒಟ್ಟು 95 ಶಿಫಾರಸುಗಳನ್ನು ನೀಡಿದೆ. ಅವುಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಬಿಬಿಎಂಪಿ ಸಲ್ಲಿಸಿದ ಹೇಳಿಕೆ ಆಧರಿಸಿ ಪಿಐಎಲ್ ಇತ್ಯರ್ಥಪಡಿಸಲಾಗಿತ್ತು. ತಾನು ಸಲ್ಲಿಸಿದ್ದ ಹೇಳಿಕೆಯನ್ನು ಬಿಬಿಎಂಪಿ ಪಾಲಿಸಿಲ್ಲ. ಹಾಗಾಗಿ ರಸ್ತೆಗಳು ಕೆಟ್ಟಿವೆ. ಇದು ನ್ಯಾಯಾಂಗ ನಿಂದನೆಗೆ ಸಮ ಎಂದು ಅರ್ಜಿಯಲ್ಲಿ ದೂರಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT