ADVERTISEMENT

ಹಬ್ಬಗಳ ವೈಶಿಷ್ಟ್ಯ ಉಳಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:10 IST
Last Updated 16 ಅಕ್ಟೋಬರ್ 2012, 19:10 IST

ಯಲಹಂಕ: ಮರೆಯಾಗುತ್ತಿರುವ ನಮ್ಮ ಹಿಂದಿನ ಗ್ರಾಮೀಣ ಸೊಗಡಿನ ಜಾತ್ರೆಗಳು ಮತ್ತು ಹಬ್ಬಗಳ ಆಚರಣೆಯ ವೈಶಿಷ್ಟ್ಯವನ್ನು ಉಳಿಸಿಕೊಂಡು ಬರುವ ಅಗತ್ಯವಿದೆ ಎಂದು ಅದಮ್ಯ ಚೇತನ ಟ್ರಸ್ಟ್‌ನ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಹೇಳಿದರು.

ಉಪನಗರದ ಬಾಲವಿಕಾಸ ಶಿಶುವಿಹಾರ ಕೇಂದ್ರದಲ್ಲಿ ಆಯೋಜಿಸಿದ್ದ `ಮಕ್ಕಳ ಜಾತ್ರೆ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಇಲ್ಲಿ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮ ಕೇವಲ ಈ ಭಾಗಕ್ಕೆ ಮಾತ್ರ ಸೀಮಿತವಾಗಿರದೆ, ಬೆಂಗಳೂರಿನ ಎಲ್ಲ ಮಕ್ಕಳಿಗೂ ಇಂತಹ ಅವಕಾಶ ಸಿಗುವಂತಾಗಬೇಕು ಎಂದು ಆಶಿಸಿದರು.

ಬಾಲವಿಕಾಸ ಕೇಂದ್ರದ ಸಂಸ್ಥಾಪಕಿ ಕೆ.ನಾಗಮಣಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಓದಿನ ಜೊತೆಗೆ ಇತರೆ ಚಟುವಟಿಕೆಗಳೂ ಅತ್ಯಗತ್ಯ. ಅವರನ್ನು ಇತರ  ಕ್ಷೇತ್ರಗಳಲ್ಲಿ ಪಾಲ್ಗೊಳ್ಳಲು ಸ್ವತಂತ್ರವಾಗಿ ಬಿಟ್ಟಾಗ ಎಲ್ಲ ವಿಭಾಗಗಳಲ್ಲಿ ಪರಿಪೂರ್ಣತೆ ಸಾಧಿಸುವುದರ ಜೊತೆಗೆ ಓದಿನಲ್ಲೂ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದರು. ಕಸ್ತೂರಬಾ ಟ್ರಸ್ಟ್‌ನ ಟ್ರಸ್ಟಿ ಉಷಾ ವಿಶ್ವನಾಥ್, ನಿಬ್ಸಿಡ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಡಾ.ತಾರಾ ಹಾಜರಿದ್ದರು. ಉಪನಗರ ವ್ಯಾಪ್ತಿಯ ಶಾಲೆಗಳ ಸುಮಾರು 500 ಮಕ್ಕಳು ಭಾಗವಹಿಸಿದ್ದರು. ಮಕ್ಕಳು ತಯಾರಿಸಿದ ವಿವಿಧ ವಿನ್ಯಾಸದ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.


ಬಹುಮಾನ: ಮಕ್ಕಳಿಗಾಗಿ ಆಟೋಟಗಳು, ಪೇಯಿಂಟಿಂಗ್, ಕೊಲ್ಯಾಜ್, ಚಿತ್ರಕಲೆ, ಹಾಡು, ನೃತ್ಯ ಹಾಗೂ ಅಡುಗೆ ಸಿದ್ಧಪಡಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT