ADVERTISEMENT

ಹಬ್ಬ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಹಬ್ಬ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ
ಹಬ್ಬ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ   

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಸೋಮವಾರ ಖರೀದಿಯ ಭರಾಟೆ ಕಂಡುಬಂತು. ಹಬ್ಬದಿಂದಾಗಿ ಹೂ, ಹಣ್ಣು, ತರಕಾರಿ, ಪೂಜಾ ಸಾಮಗ್ರಿ, ಮಣ್ಣಿನ ಹಣತೆ, ಬಟ್ಟೆ, ದಿನಸಿ, ಸಿಹಿ ತಿನಿಸುಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಪಟಾಕಿಗಳಿಗೆ ಬೇಡಿಕೆಯೂ ಹೆಚ್ಚಿದೆ.

ಪ್ರತಿಹಬ್ಬಕ್ಕೆ ಹೂ, ಹಣ್ಣು ಹಾಗೂ ತರಕಾರಿಯ ಬೆಲೆ ಹೆಚ್ಚಾಗುವುದು ವಾಡಿಕೆ. ದಕ್ಷಿಣ ಒಳನಾಡಿನಲ್ಲಿ ಕೆಲವು ತಿಂಗಳಿಂದ ಸಮೃದ್ಧ ಮಳೆಯಾಗಿದೆ. ಹಾಗಾಗಿ ಮಾರುಕಟ್ಟೆಗೆ ತರಕಾರಿಯ ಲೋಡ್‌ಗಳು ಬರುತ್ತಿವೆ. ಇದರಿಂದಾಗಿ ಇವುಗಳ ಬೆಲೆ ಗಣನೀಯವಾಗಿ ಹೆಚ್ಚಿಲ್ಲ. ಇದರಿಂದಾಗಿ ಗ್ರಾಹಕರು ನಿರಾಳರಾಗಿದ್ದಾರೆ.

‘ಮಳೆಯಿಂದಾಗಿ ಮಾರುಕಟ್ಟೆಗೆ ಬರುವ ಹೂಗಳ ಪ್ರಮಾಣ ಶೇ 30 ರಷ್ಟು ಕಡಿಮೆಯಾಗಿದೆ. ಈ ಹಬ್ಬಕ್ಕೆ ದಸರಾ ಹಬ್ಬದಷ್ಟು ಹೂವಿನ ಬೇಡಿಕೆ ಇಲ್ಲ. ಹಾಗಾಗಿ ಗ್ರಾಹಕರಿಗೆ ಹೂ ಪೂರೈಕೆಯಲ್ಲಿ ಕೊರತೆ ಆಗುತ್ತಿಲ್ಲ’ ಎಂದು ಹೂವಿನ ವ್ಯಾಪಾರಿ ಕೆ.ಮಂಜುನಾಥ್‌ ತಿಳಿಸಿದರು.

ADVERTISEMENT

‘ಈ ಬಾರಿ ಹಬ್ಬಕ್ಕೆ ದರಗಳೇನೂ ಹೆಚ್ಚಿಲ್ಲ. ಕನಕಾಂಬರ ಹೂವಿನ ದರ ಸ್ವಲ್ಪ ಜಾಸ್ತಿ ಎನಿಸಿತು’ ಎಂದು ಮಾರತ್‌ಹಳ್ಳಿಯ ನಿವಾಸಿ ದಾಕ್ಷಾಯಿಣಿ ತಿಳಿಸಿದರು.

ಪೂಜಾ ಸಾಮಗ್ರಿ: ಪೂಜಾ ಸಾಮಗ್ರಿಗಳಾದ ಹಸಿಅಡಕೆಕಾಯಿ ₹ 30 (ಪ್ರತಿ ಡಜನ್‌ಗೆ), 50 ವೀಳ್ಯದೆಲೆಯ ಕಟ್ಟು ₹ 25ಕ್ಕೆ, ತೆಂಗಿನಕಾಯಿ ₹ 20 ರಿಂದ ಗರಿಷ್ಠ ₹ 30ಕ್ಕೆ ಮಾರಾಟ ಆಗುತ್ತಿವೆ. ಗಾತ್ರಕ್ಕೆ ಅನುಗುಣವಾಗಿ ಬೂದುಗುಂಬಳಕಾಯಿಯ ದರ ಕನಿಷ್ಠ ₹ 50 ರಿಂದ ₹ 250ರ ವರೆಗೂ ಇದೆ. 25 ಬಾಳೆಎಲೆಗಳ ಕಟ್ಟು ₹ 50ಕ್ಕೆ ಸಿಗುತ್ತಿದೆ.

ಮಣ್ಣಿನ ಹಣತೆಗಳ ಮಾರಾಟ ಜೋರು: ಹಬ್ಬಕ್ಕೆ ಮನೆಯಂಗಳವನ್ನು ಹಣತೆಯ ಬೆಳಕಿನಿಂದ ಅಲಂಕರಿಸಲು ಗೃಹಿಣಿಯರು ಮಣ್ಣಿನ ಹಣತೆಗಳನ್ನು ಕೊಳ್ಳುತ್ತಿದ್ದಾರೆ. ಈ ಹಣತೆಗಳ ಗಾತ್ರ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಕನಿಷ್ಠ ₹ 2 ರಿಂದ ಗರಿಷ್ಠ 120 ರವರೆಗೆ ದರಗಳನ್ನು ವ್ಯಾಪಾರಿಗಳು ನಿಗದಿ ಪಡಿಸಿದ್ದಾರೆ.

ಹಬ್ಬದ ಪ್ರಯುಕ್ತ ಬಟ್ಟೆ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ. ಇವುಗಳ ಖರೀದಿಗಾಗಿ ಮಾರುಕಟ್ಟೆಯಲ್ಲಿ ಜನಸಂದಣಿ ಇತ್ತು.

***
ಹೂಗಳು ದರಗಳು(ಪ್ರತಿ ಕೆ.ಜಿ.ಗೆ– ₹ ಗಳಲ್ಲಿ)

ಕನಕಾಂಬರ 800
ಮಲ್ಲಿಗೆ 400
ಕಾಕಡ 300
ಸೇವಂತಿಗೆ 140
ಗಣಗಲೆ 120
ಗುಲಾಬಿ 100
ಸುಗಂಧರಾಜ 80
ಚೆಂಡುಹೂ 40

***

ತರಕಾರಿ  ದರಗಳು (ಪ್ರತಿ ಕೆ.ಜಿ.ಗೆ–₹ ಗಳಲ್ಲಿ)

ಬೀನ್ಸ್‌ 80
ಹಿರೇಕಾಯಿ 60
ಗೊರಿಕಾಯಿ 60
ಕ್ಯಾಪ್ಸಿಕಮ್‌ 60
ಬೆಳ್ಳುಳ್ಳಿ 60
ಬದನೆಕಾಯಿ 50
ಟೊಮೆಟೊ 40
ಬೆಂಡೆಕಾಯಿ 40
ಕ್ಯಾರೆಟ್‌ 40
ಮೂಲಂಗಿ 40
ಬೀಟ್‌ರೂಟ್‌ 40
ಹಸಿಮೆಣಸಿನಕಾಯಿ 40
ಮೈಸೂರು ಬದನೆ 40
ಆಲೂಗಡ್ಡೆ 25
ಈರುಳ್ಳಿ 20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.