ADVERTISEMENT

ಹಳ್ಳಿಗಳತ್ತ ರಂಗಭೂಮಿ ಕೊಂಡೊಯ್ದ ಸಿಜಿಕೆ: ಪ್ರಸನ್ನ

ಸಂಸ ಬಯಲು ರಂಗಮಂದಿರದಲ್ಲಿ ಸಿಜಿಕೆ ಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST
ರಂಗ ನಿರಂತರ ಸಾಂಸ್ಕೃತಿಕ ಸಂಘವು ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಕಾರ್ಯಕ್ರಮವನ್ನು ನಟ ಪ್ರಕಾಶ್‌ ರೈ, ರಾಜ್ಯ ಸಭಾ ಸದಸ್ಯೆ ಬಿ.ಜಯಶ್ರೀ, ರಂಗನಿರಂತರ ಅಧ್ಯಕ್ಷ ಡಿ.ಕೆ.ಚೌಟ, ಸಾಹಿತಿ ಕೆ.ಮರುಳ ಸಿದ್ದಪ್ಪ, ರಂಗನಿರ್ದೇಶಕರಾದ ಪ್ರಸನ್ನ, ಬಸವಲಿಂಗಯ್ಯ, ಎಂ.ಜಿ.ಜ್ಯೋತಿಷ್‌ ಅವರು ಆಕಾಶಬುಟ್ಟಿಯನ್ನು ಹಾರಿಸುವ ಮೂಲಕ ಉದ್ಘಾಟಿಸಿದರು
ರಂಗ ನಿರಂತರ ಸಾಂಸ್ಕೃತಿಕ ಸಂಘವು ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಕಾರ್ಯಕ್ರಮವನ್ನು ನಟ ಪ್ರಕಾಶ್‌ ರೈ, ರಾಜ್ಯ ಸಭಾ ಸದಸ್ಯೆ ಬಿ.ಜಯಶ್ರೀ, ರಂಗನಿರಂತರ ಅಧ್ಯಕ್ಷ ಡಿ.ಕೆ.ಚೌಟ, ಸಾಹಿತಿ ಕೆ.ಮರುಳ ಸಿದ್ದಪ್ಪ, ರಂಗನಿರ್ದೇಶಕರಾದ ಪ್ರಸನ್ನ, ಬಸವಲಿಂಗಯ್ಯ, ಎಂ.ಜಿ.ಜ್ಯೋತಿಷ್‌ ಅವರು ಆಕಾಶಬುಟ್ಟಿಯನ್ನು ಹಾರಿಸುವ ಮೂಲಕ ಉದ್ಘಾಟಿಸಿದರು   

ಬೆಂಗಳೂರು: ‘ನಗರಮುಖಿಯಾಗಿದ್ದ ರಂಗಭೂಮಿಯ ಕಿವಿಹಿಂಡಿ ಹಳ್ಳಿಗಳತ್ತ ಕೊಂಡೊಯ್ದವರು ಸಿ.ಜಿ.ಕೆ. ಸೃಜನಶೀಲ ಕಲಾವಿದ, ಒಳ್ಳೆಯ ಕುಶಲಕರ್ಮಿ’ ಎಂದು ರಂಗನಿರ್ದೇಶಕ ಪ್ರಸನ್ನ ಸ್ಮರಿಸಿದರು.

ರಂಗ ನಿರಂತರ ಸಾಂಸ್ಕೃತಿಕ ಸಂಘವು ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಕಾರ್ಯ­ಕ್ರಮ­ವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ರಂಗಭೂಮಿಯು ಮನ­ರಂಜನೆ ಮತ್ತು ಜನಪರ ಚಳವಳಿ ಎರಡನ್ನೂ ಪ್ರತಿನಿಧಿಸಬೇಕು ಎಂಬು­ದನ್ನು ನೆನಪಿಸಿದವರು, ರಂಗ ಕಲಾ­ವಿದರಿಗೆ ಕೀಳರಿಮೆಯೂ ಇಲ್ಲ ಮೇಲ­ರಿಮೆಯೂ ಇಲ್ಲ ಎಂಬುದನ್ನು ತೋರಿಸಿ­ದವರು ಸಿಜಿಕೆ’ ಎಂದು ನೆನಪಿಸಿದರು.

ನಟ ಪ್ರಕಾಶ ರೈ ಮಾತನಾಡಿ, ‘ಸಿಜಿಕೆ ಅವರು ನನಗೆ ನೇರವಾಗಿ ಗುರುಗಳಲ್ಲ. ಅವರು 150 ದಿನಗಳ ಪ್ರಯೋಗಾತ್ಮಕ ರಂಗೋತ್ಸವವನ್ನು ಏರ್ಪಡಿಸಿದಾಗ ನನ್ನ ಊರು, ಹೆಸರು ಏನೆಂದು ಕೇಳದೆ ನನಗೆ ಮೂರು ನಾಟಕಗಳಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಆ ನಾಟಕಗಳ ಪಾತ್ರ ಮಾಡುವಾಗಲೇ ಅವರಿಂದ ಬಹಳಷ್ಟು ಕಲಿತೆ’ ಎಂದು ನೆನಪಿಸಿಕೊಂಡರು.

ಸಾಹಿತಿ ಕೆ.ಮರುಳಸಿದ್ದಪ್ಪ, ‘ಸಿಜಿಕೆ ಅಪರೂಪದ ಸಂಘಟಕ. ಶಿಸ್ತು, ಶ್ರದ್ಧೆ­ಯಿಂದ ರಂಗಭೂಮಿಗೆ ಅಕಾಡೆಮಿಕ್‌ ಸ್ವರೂಪ ನೀಡಿದವರು. ರಂಗಭೂಮಿ, ರಾಜಕೀಯ, ಸಾಮಾಜಿಕ ಬಳಗವನ್ನು ಒಟ್ಟು ಮಾಡಿ ಕಟ್ಟಿದವರು’ ಎಂದರು.

ಅಕಾಡೆಮಿಗಳಿಲ್ಲದೆ ಸಾಂಸ್ಕೃತಿಕ ನೀತಿಯೇಕೇ?
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಹಳ ನಿರೀಕ್ಷೆ­ಗಳಿದ್ದವು. ಆದರೆ, ನಿರೀಕ್ಷೆಯಂತೆ ಸರ್ಕಾರದಿಂದ ಕೆಲಸಗಳು ಆಗು­ತ್ತಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳಾಗುತ್ತ ಬಂದರೂ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ­ವಾಗಿಲ್ಲ. ಮುಂದೆ ಲೋಕಸಭಾ ಚುನಾವಣೆಯಿದೆ. ನೀತಿ ಸಂಹಿತೆ ಹೆಸರಿನಲ್ಲಿ ನೇಮಿಸುವ ಹಾಗಿಲ್ಲ ಎಂದು ಸರ್ಕಾರ ಸಬೂಬು ಹೇಳು­ತ್ತದೆ. ಇದರಿಂದ ಮತ್ತೆ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ತಡವಾಗು­ತ್ತದೆ. ಅಕಾಡೆಮಿಗಳಿಲ್ಲದೆ ಸಾಂಸ್ಕೃತಿಕ ನೀತಿ ನಿರೂಪಣೆ ಸಮಿತಿ ಏಕೆ ಬೇಕು?

–ಕೆ.ಮರುಳಸಿದ್ದಪ್ಪ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT