ADVERTISEMENT

ಹಸಿತ್ಯಾಜ್ಯ ರೈತರಿಗೆ ನೀಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST
ಹಸಿತ್ಯಾಜ್ಯ ರೈತರಿಗೆ ನೀಡಲು ನಿರ್ಧಾರ
ಹಸಿತ್ಯಾಜ್ಯ ರೈತರಿಗೆ ನೀಡಲು ನಿರ್ಧಾರ   

ಬೆಂಗಳೂರು: `ಮಂಡೂರು ತ್ಯಾಜ್ಯ ವಿಲೇವಾರಿ ಘಟಕದ ಮೇಲಿನ ಒತ್ತಡ ತಗ್ಗಿಸಲು ಹಸಿತ್ಯಾಜ್ಯವನ್ನು ನಗರದ ಸುತ್ತಮುತ್ತಲಿನ ತಾಲ್ಲೂಕುಗಳ ರೈತರಿಗೆ ನೀಡಲು ನಿರ್ಧರಿಸಲಾಗಿದೆ~ ಎಂದು ಉಪ ಮೇಯರ್ ಎಲ್.ಶ್ರೀನಿವಾಸ್ ತಿಳಿಸಿದರು.

ನಗರದ ತ್ಯಾಜ್ಯ ನಿರ್ವಹಣೆಯ ಬಗ್ಗೆ ಪಾಲಿಕೆಯ ವಲಯಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಅವರು ಸಭೆ ನಡೆಸಿದರು.

`ಗೊಬ್ಬರಕ್ಕಾಗಿ ಹಸಿತ್ಯಾಜ್ಯವನ್ನು ತೆಗೆದುಕೊಳ್ಳಲು ಮುಂದೆ ಬರುವ ರೈತರಿಗೆ ಸಮರ್ಪಕವಾಗಿ ಹಸಿತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಮಂಡೂರಿನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹೆಚ್ಚಿನ ಕಸ ಸಂಗ್ರಹವಾಗಿದೆ. ಇದರಿಂದ ವೈಜ್ಞಾನಿಕ ಕಸ ವಿಲೇವಾರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಹಸಿತ್ಯಾಜ್ಯವನ್ನು ಗೊಬ್ಬರಕ್ಕಾಗಿ ಬಳಸಿಕೊಳ್ಳುವ ರೈತರಿಗೆ ನೀಡಬೇಕು~ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

`ಪ್ರತಿ ವಾರ್ಡ್‌ಗಳಲ್ಲಿ ಗುರುತಿಸಲಾದ ಸ್ಥಳಗಳಲ್ಲಿ ಶೀಘ್ರವೇ ಒಣತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಹೊಸ ವಲಯಗಳಲ್ಲಿ ಸಂಗ್ರಹಿಸಲಾದ ಹಸಿ ಮತ್ತು ಒಣ ಕಸವನ್ನು ಯಾವುದೇ ಕಾರಣಕ್ಕೂ ಮಂಡೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಬಾರದು~ ಎಂದು ಅವರು ತಿಳಿಸಿದರು.

`ಬೆಂಗಳೂರು ಮಹನಗರ ಸಾರಿಗೆ ಸಂಸ್ಥೆ ಮತ್ತು ನಗರ ಜಿಲ್ಲಾಧಿಕಾರಿಗಳು ಪಾಲಿಕೆಗೆ ಹಸ್ತಾಂತರಿಸಿದ ಜಾಗಗಳಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಮಂಡೂರಿಗೆ ಹೋಗುವ ಕಸದ ಲಾರಿಗಳ ಸಂಚಾರವನ್ನು ನಿಯಂತ್ರಿಸಿ, ಗ್ರಾಮಸ್ಥರ ವಾಹನಗಳ ಓಡಾಟಕ್ಕೆ ಹಾಗೂ ಘಟಕದಲ್ಲಿರುವ ಈಗಾಗಲೇ ಇರುವ ಲಾರಿಗಳಿಂದ ಕಸ ಖಾಲಿ ಮಾಡಲು ಅನುಕೂಲವಾಗುವಂತೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು~ ಎಂದು  ಹೇಳಿದರು.

`ತ್ಯಾಜ್ಯ ವಿಲೇವಾರಿಗೆ ಚಿಂತಾಮಣಿಯಲ್ಲಿ ಗುರುತಿಸಲಾದ ಸ್ಥಳಕ್ಕೆ ಹಸಿತ್ಯಾಜ್ಯ ಕಳುಹಿಸುವಂತೆ ಇನ್ನು ಎರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು. ರಾಜರಾಜೇಶ್ವರಿನಗರ, ದಾಸರಹಳ್ಳಿ ಮತ್ತು ಯಲಹಂಕ ವಲಯಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಹೊಸ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನು ಮೂರು ತಿಂಗಳಲ್ಲಿ ಕೆಲಸ ಆರಂಭಿಸುವಂತೆ ಗುತ್ತಿಗೆದಾರರಿಗೆ ಆದೇಶ ನೀಡಲಾಗುವುದು~ ಎಂದರು.

ಸಭೆಯಲ್ಲಿ ಮಾತನಾಡಿದ ಪಾಲಿಕೆಯ ಆಯುಕ್ತ ರಜನೀಶ್ ಗೋಯಲ್, `ವಾರ್ಡ್ ಮಟ್ಟದಲ್ಲಿ ಆಯಾ ದಿನವೇ ಕಸ ವಿಲೇವಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಲಾರಿಗಳು ಬರದೇ ಇದ್ದರೆ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ನಗರದ ಕಸದ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು~ ಎಂದರು.

`ಪಾಲಿಕೆಯ ಎಲ್ಲ ವಲಯಗಳಲ್ಲಿ ಕಸ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಕಸ ಉತ್ಪತ್ತಿಯಾಗುವುದರಿಂದ ಅಧಿಕಾರಿಗಳು ಕಸ ವಿಲೇವಾರಿಗಾಗಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.