ADVERTISEMENT

ಹಾಲಿಗಿಂತ ಹನಿ ನೀರು ತುಟ್ಟಿ!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST
ಹಾಲಿಗಿಂತ ಹನಿ ನೀರು ತುಟ್ಟಿ!
ಹಾಲಿಗಿಂತ ಹನಿ ನೀರು ತುಟ್ಟಿ!   

ಬೆಂಗಳೂರು: ಬೇಸಿಗೆ ಆರಂಭವಾಯಿತೆಂದರೆ ನಗರದ ಗಲ್ಲಿ ಗಲ್ಲಿಯಲ್ಲೂ ನೀರಿನ ದಾಹ. ಆದರೆ ಕಳೆದ ನವೆಂಬರ್ ತಿಂಗಳಿನಿಂದಲೇ ಬನಶಂಕರಿ 3ನೇ ಹಂತದಲ್ಲಿನ ವಿವೇಕಾನಂದ ನಗರದ ಖಾದಿ ಬಡಾವಣೆಯ 4ನೇ ಮುಖ್ಯ ರಸ್ತೆಯಲ್ಲಿರುವ ಕೆಲವು ಮನೆಗಳಿಗೆ ಕುಡಿಯುವ ನೀರಿನ ಭಾಗ್ಯವಿಲ್ಲ!

ಖಾದಿ ಬಡಾವಣೆಯಲ್ಲಿ ಒಟ್ಟು 4 ಮುಖ್ಯ ರಸ್ತೆಗಳಿದ್ದು, 52 ಮನೆಗಳಿವೆ. ಮೊದಲ ಮತ್ತು ಎರಡನೇ ಮುಖ್ಯ ರಸ್ತೆಯಲ್ಲಿರುವ ಮನೆಗಳಿಗೆ ದಿನವೊಂದಕ್ಕೆ ಎರಡು ತಾಸು ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ  4ನೇ ರಸ್ತೆಯಲ್ಲಿರುವ ಹತ್ತು ಮನೆಗಳು ಮಾತ್ರ ಕುಡಿಯುವ ನೀರಿನಿಂದ ವಂಚಿತಗೊಂಡಿವೆ.

ತಿಂಗಳಿಗೊಮ್ಮೆ ಕಿರು ಬೆರಳ ಗಾತ್ರದಲ್ಲಿ ತೊಟ್ಟಿಕ್ಕುವ ನೀರಿಗೂ ಗ್ರಾಹಕರು ಭರಪೂರ ಬಿಲ್ ಪಾವತಿಸಬೇಕಿದೆ. ಕುಡಿಯುವ ನೀರಿನ ಕೊರತೆಯಿದ್ದರೂ ನೀರಿನ ಬಿಲ್ ಮಾತ್ರ ಪ್ರತಿ ತಿಂಗಳು ಕರಾರುವಕ್ಕಾಗಿ ಬರುತ್ತಿದೆ. ಇಲ್ಲಿ ಹನಿ-ಹನಿ ನೀರು ಹಾಲಿಗಿಂತ ತುಟ್ಟಿಯಾಗಿದೆ!

ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ಬಡಾವಣೆಯಲ್ಲಿ ಬೆಳಿಗ್ಗೆ ಮನೆ ಕೆಲಸ ಮುಗಿಸಿ ಕಚೇರಿಗೆ ತೆರಳುವ ಗೃಹಿಣಿಯರು ನೀರಿನ ಬಗ್ಗೆ ಚಿಂತಿಸುತ್ತಾರೆ. ಏಕೆಂದರೆ, ಈ ಭಾಗದಲ್ಲಿ ನೀರು ಪೂರೈಕೆಗೆ ನಿಗದಿತ ವೇಳೆಯೇ ಇಲ್ಲ.
 
ವಾರದಲ್ಲಿ ಯಾವ ದಿನ ನೀರು ಪೂರೈಕೆಯಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.  ಬೆಳಿಗ್ಗೆಯಾಗುತ್ತಿದ್ದಂತೆ ಬಿಂದಿಗೆ, ಬಕೆಟ್ಟುಗಳನ್ನು ಮನೆ ಮುಂದೆ ಇಟ್ಟು, ಪಕ್ಕದ ಮನೆಯವರಿಗೆ ತಿಳಿಸಿ ನೌಕರಿಗೆ ತೆರಳುವುದು ಸಾಮಾನ್ಯವಾಗಿದೆ.

ಕಚೇರಿ ಕೆಲಸ ಮುಗಿಸಿ ಬಂದ ನಂತರವೂ ರಾತ್ರಿಯಿಡೀ ಕುಡಿಯುವ ನೀರಿಗಾಗಿ ಕಾಯುವುದು ಇಲ್ಲಿ ಸಾಮಾನ್ಯ.
ಅನಿರ್ದಿಷ್ಟ ದಿನದಲ್ಲಿ ಕೇವಲ ಅರ್ಧ ಗಂಟೆ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ಮನೆಯಲ್ಲೇ ಟ್ಯಾಂಕ್ ವ್ಯವಸ್ಥೆಯಿರುವ ಮಧ್ಯಮ ವರ್ಗದ ಜನ ನೀರು ಸಿಗದಿದ್ದಾಗ 350 ರೂಪಾಯಿ ತೆತ್ತು ಮೂರು ದಿನಗಳಿಗೊಮ್ಮೆ ಖಾಸಗಿ ಟ್ಯಾಂಕರ್ ನೀರು ಪಡೆಯುತ್ತಿದ್ದಾರೆ. ಆದರೆ ಸಂಪ್ ವ್ಯವಸ್ಥೆ ಇರದ ನಿವಾಸಿಗಳು 35 ರೂಪಾಯಿ ನೀಡಿ ಬಿಂದಿಗೆ ನೀರು ಪಡೆಯಬೇಕಿದೆ.

ಕಾರಣವೇನು?
ಬಡಾವಣೆಯಲ್ಲಿರುವ ಗಣೇಶ ದೇವಸ್ಥಾನದ ಸಮೀಪದಲ್ಲಿ ನೀರು ವಿತರಣಾ ಪೈಪ್ ಅಳವಡಿಸಲಾಗಿದ್ದು, ಈ ಮನೆಗಳು ಪೈಪ್‌ನ ಮಟ್ಟದಿಂದ ತುಸು ಎತ್ತರದಲ್ಲಿ ಇವೆ. ಬೇಸಿಗೆಯಲ್ಲಿಯೇ ನೀರಿನ ಮಟ್ಟ ಕಡಿಮೆ ಇರುವುದರಿಂದ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬುದು ಜಲಮಂಡಳಿಯ ಅಧಿಕಾರಿಗಳ ವಾದ.
 
ಆದರೆ, ರಸ್ತೆ ಅಗೆದು ಪರ್ಯಾಯ ಪೈಪ್‌ಲೈನ್ ಅಳವಡಿಸಿದರೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಮನವಿ ಮಾಡಲಾಗಿದೆ. ಬಿಬಿಎಂಪಿ ಮತ್ತು ಜಲಮಂಡಳಿಯ ಅಧಿಕಾರಿಗಳು ಕೇವಲ ಭರವಸೆಗಳನ್ನು ತೇಲಿ ಬಿಡುತ್ತಾರೆಯೇ ವಿನಃ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ದೂರು.

ಈ ಬಗ್ಗೆ ಜಲಮಂಡಳಿಯ ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲೇಶಪ್ಪ ಅವರನ್ನು ಸಂಪರ್ಕಿಸಿದಾಗ, `ಬಡಾವಣೆಯಲ್ಲಿ ನೀರು ಪೂರೈಕೆಯಾಗದೇ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.

ಸಹಾಯಕ ಎಂಜಿನಿಯರ್ ಧನಂಜಯ್, `ಮನೆಗಳು ಎತ್ತರದಲ್ಲಿರುವುದರಿಂದ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ರಸ್ತೆ ಅಗೆಯಲು ಬಿಬಿಎಂಪಿ ಅನುಮತಿ ಬೇಕು. ಇದಲ್ಲದೇ ಕಾಮಗಾರಿ ನಡೆಸಲು ಕಾರ್ಮಿಕರ ಕೊರತೆಯಿದ್ದು, ಮುಂದಿನ ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು~ ಎಂದು ಹೇಳಿದರು.

ನಿವಾಸಿಗಳು ಏನನ್ನುತ್ತಾರೆ

ಕಳೆದ ಮೂರು ತಿಂಗಳಿನಿಂದ ನೀರೇ ಇಲ್ಲದೇ ಪರದಾಡುವಂತಾಗಿದೆ. ನೀರಿನ ಅವಶ್ಯಕತೆಯನ್ನು ತಿಳಿದು ಕೂಡ ಜಲಮಂಡಳಿಯು ನಮ್ಮ ಮನವಿಯನ್ನು ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ಸ್ಥಳೀಯ ಎಂಜಿನಿಯರ್, ಪಾಲಿಕೆ ಸದಸ್ಯರು ಮತ್ತು ಶಾಸಕರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ, ಪರಿಹಾರ ಮಾತ್ರ ಶೂನ್ಯ.
-ಕೆ.ಎಸ್.ತಿಪ್ಪೇಸ್ವಾಮಿ

ಮಕ್ಕಳು ಮತ್ತು ಬಾಣಂತಿಯರಿರುವ ಮನೆಯಲ್ಲಿ ನೀರಿಗೆ ಬರ ಬಂದರೆ ಅದೆಷ್ಟು ಕಷ್ಟ ಎಂಬುದು ಜನಪ್ರತಿನಿಧಿಗಳು ಇನ್ನೂ ತಿಳಿದಂತಿಲ್ಲ.

ಮತ ಯಾಚನೆ ಸಂದರ್ಭದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುತ್ತೇವೆ ಎಂದು ಬೊಗಳೆ ಬೀಡುವ ಇವರಿಗೆ ಏನು ಮಾಡಬೇಕು ಎಂಬುದು ತಿಳಿಯದು?
- ಎಂ.ಪಿ.ಸುರೇಶ್

ಬೋರ್‌ವೆಲ್‌ಗಳಲ್ಲಿರುವ ನೀರನ್ನೇ ಕುಡಿಯಬೇಕು. ನೀರಿನ ಸಮಸ್ಯೆಯಿಂದಾಗಿ ಬಾಡಿಗೆದಾರರು ಮನೆ ತೊರೆದು ಬೇರೆ ಬಡಾವಣೆಗಳಿಗೆ ಹೋಗುತ್ತಿದ್ದು, ಇದೇ ದೊಡ್ಡ ಸಮಸ್ಯೆಯಾಗಿದೆ.
- ಜಿ.ಎಸ್.ರೋಹಿಣಿ  ಕುಮಾರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.