ADVERTISEMENT

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ಸಾರ್ಥಕ್
ಸಾರ್ಥಕ್   

ಬೆಂಗಳೂರು: ಬೆಳ್ಳಂದೂರಿನಲ್ಲಿರುವ ಚೈತನ್ಯ ಇ–ಟೆಕ್ನೊ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾರ್ಥಕ್ ಪುರಾಣಿಕ್ (17), ಹಾಸ್ಟೆಲ್‌ನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ಆತ, ಅರ್ಧ ತಾಸು ಕಳೆದರೂ ತನ್ನ ಕೋಣೆಗೆ ವಾಪಸಾಗಿರಲಿಲ್ಲ. ಹೀಗಾಗಿ, ಸ್ನೇಹಿತರು ಆತನನ್ನು ಹುಡುಕಿಕೊಂಡು ಶೌಚಾಲಯದ ಬಳಿ ತೆರಳಿದ್ದರು. ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಾರದಿದ್ದಾಗ ಹಾಸ್ಟೆಲ್‌ ಸಿಬ್ಬಂದಿಯ ಗಮನಕ್ಕೆ ತಂದಿದ್ದರು. ಅವರು ಬಾಗಿಲು ಮುರಿದು ನೋಡಿದಾಗ ಸಾರ್ಥಕ್ ನಿತ್ರಾಣನಾಗಿ ಬಿದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹಾಸ್ಟೆಲ್ ಸಿಬ್ಬಂದಿ ಸಾರ್ಥಕ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆತ ಕೊನೆಯುಸಿರೆಳೆದಿರುವುದನ್ನು ವೈದ್ಯರು ಖಚಿತಪಡಿಸಿದರು.

ADVERTISEMENT

ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದೆ ಬೆಳ್ಳಂದೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ವಿದ್ಯಾರ್ಥಿಯ ಪೋಷಕರು ಸಹ ಯಾರ ಮೇಲೂ ಶಂಕೆ ವ್ಯಕ್ತಪಡಿಸಿಲ್ಲ. ಹೀಗಾಗಿ, ‘ಅಸಹಜ ಸಾವು’ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

‘ಧಾರವಾಡದ ಶ್ರೀಕಾಂತ್ ಪುರಾಣಿಕ್ ಹಾಗೂ ಸುಚಿತ್ರಾ ದಂಪತಿಯ ಮಗನಾದ ಸಾರ್ಥಕ್, ಒಂದೂವರೆ ವರ್ಷದಿಂದ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಆತ, ಒಂದು ತರಗತಿಯನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ’ ಎಂದು ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿ ವಂಶಿಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.