ಬೆಂಗಳೂರು: ‘ರೈತರ, ಬಡವರ ಹಿತ ಕಡೆಗಣಿಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೇಳಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕದ ವತಿಯಿಂದ ಸೋಮವಾರ ಮೈಸೂರು ರಸ್ತೆಯ ಕಂಬೀಪುರ ಸಮೀಪ ಹಮ್ಮಿಕೊಂಡಿದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಜೆಡಿಎಸ್ ಪಕ್ಷದಿಂದ ಎಲ್ಲ ಅಧಿಕಾರವನ್ನು ಅನುಭವಿಸಿ ಬೇರೆ ಪಕ್ಷ ಸೇರಿರುವ ನಗರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸರ್ವಮಂಗಳ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ ಅವರಿಗೆ ಈ ಭಾಗದ ಜನರು ಸರಿಯಾದ ಪಾಠ ಕಲಿಸಬೇಕು’ ಎಂದು ತಿಳಿಸಿದರು.
‘ರಾಜ್ಯದ ಅಭಿವೃದ್ದಿ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ. ಇದನ್ನು ಅರಿತು ಜೆಡಿಎಸ್ ಬೆಂಬಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅಧಿಕಾರ ಶಾಶ್ವತವಲ್ಲ. ಜನರ ಸೇವೆ ಮಾಡುವುದೇ ಪಕ್ಷಗಳ ಗುರಿಯಾಗಬೇಕು.
ಪಕ್ಷದ ಆಡಳಿತ ಅವಧಿಯಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು’ ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸೇರಿದ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.