ADVERTISEMENT

ಹುಟ್ಟು ಹಬ್ಬ ಆಚರಣೆ ವೇಳೆ ನಡೆದ ದುರ್ಘಟನೆ:ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಬೆಂಗಳೂರು: ಹುಟ್ಟು ಹಬ್ಬದ ಆಚರಣೆ ವೇಳೆ ಕಟ್ಟಡದಿಂದ ಕೆಳಗೆ ಬಿದ್ದು ಬಿಬಿಎಂ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿರುವ ಘಟನೆ ಸಂಜಯ ನಗರ ಬಳಿಯ ಭೂಪಸಂದ್ರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕೇರಳ ಮೂಲದ ನಿವೃತ್ತ ಕರ್ನಲ್ ಜಗನ್‌ಮೋಹನ್ ಅವರ ಪುತ್ರ ಅದಿತ್ ನಾಯರ್ (21) ಮೃತ ಪಟ್ಟವರು.
ಬಾಣಸವಾಡಿಯ ಸಿಎಂಆರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎಂ ಓದುತ್ತಿದ್ದ ಅದಿತ್, ಕುಟುಂಬದ ಸದಸ್ಯರೊಂದಿಗೆ ಇಂದಿರಾನಗರದಲ್ಲಿ ವಾಸಿಸುತ್ತಿದ್ದರು. ಜಗನ್‌ಮೋಹನ್ ಅವರು ಈಗ ಕಂಪೆನಿಯೊಂದರಲ್ಲಿ ಕೆಲಸ ಮಾಡು ತ್ತಿದ್ದಾರೆ.

ಭಾನುವಾರ (ಏ.8) ಅದಿತ್‌ಅವರ ಹುಟ್ಟಿದ ದಿನವಾಗಿತ್ತು. ಸ್ನೇಹಿತರೆಲ್ಲಾ ಶನಿವಾರ ಊರುಗಳಿಗೆ ತೆರಳುವುದರಿಂದ ಹುಟ್ಟು ಹಬ್ಬದ ಆಚರಣೆಗೆ ಅವರು ಇರುವುದಿಲ್ಲ ಎಂದು ನಿರ್ಧರಿಸಿದ ಅದಿತ್, ತನ್ನ ನಾಲ್ಕೈದು ಸ್ನೇಹಿತರೊಂದಿಗೆ ಭೂಪ ಸಂದ್ರದಲ್ಲಿರುವ ಸ್ನೇಹಿತ ನಮಿತ್‌ರ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ರಾತ್ರಿಯೇ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ.

ಅದು 13 ಅಂತಸ್ತಿನ ಕಟ್ಟಡ ವಾಗಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಸುತ್ತಲೂ ಮನೆಗಳಿವೆ. ಗಾಳಿ ಬೆಳಕಿ ಗಾಗಿ ಮಧ್ಯ ಜಾಗ ಬಿಡಲಾಗಿದೆ. ಕುಡಿದ ಮತ್ತಿನಲ್ಲಿದ್ದ ಅದಿತ್ ಹತ್ತನೇ ಮಹಡಿಯಲ್ಲಿದ್ದ ನೀರಿನ ಟ್ಯಾಂಕರ್ ಮೇಲೆ ಹತ್ತಿದ್ದಾರೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮರಣೋತ್ತರ ಪರೀಕ್ಷೆ ನೆಡೆಸಿ ಮೃತದೇಹವನ್ನು ಅವರು ಕುಟುಂಬಕ್ಕೆ ಒಪ್ಪಿಸಲಾಗಿದೆ. ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.