ಬೆಂಗಳೂರು: ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯ ಬಸ್ ನಿಲ್ದಾಣದ ಹಿಂಬದಿಯಲ್ಲಿ ಇರುವ 1.1 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ ನಡೆದಿದ್ದ ಒತ್ತುವರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹೈಕೋರ್ಟ್ ತೀರ್ಪಿನ ಅನ್ವಯ ಶುಕ್ರವಾರ ಬೆಳಿಗ್ಗೆ ತೆರವು ಮಾಡಿ ವಶಕ್ಕೆ ಪಡೆದರು.
ಮೈದಾನದಂತಿರುವ ಜಮೀನಿನ ಸುತ್ತಲೂ ಇದ್ದ ಎಂಟು ಕಟ್ಟಡಗಳು ಮತ್ತು ತಾತ್ಕಾಲಿಕ ಷೆಡ್‌ಗಳನ್ನು ತೆರವು ಮಾಡಲಾಗಿದೆ. ಎಂಟು ಕಟ್ಟಡಗಳಲ್ಲಿ ಒಟ್ಟು ಐದು ಕುಟುಂಬಗಳು ವಾಸವಿದ್ದವು. ಉಳಿದಂತೆ ಆರು ಅಂಗಡಿಗಳು ಹಾಗೂ ನಾಲ್ಕು ಗ್ಯಾರೇಜ್‌ಗಳಿದ್ದವು.
ಬೆಳಗಿನ ಜಾವ 5.30ಕ್ಕೆ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ಕುಟುಂಬಗಳು ಗುರುವಾರವೇ ಮನೆ ಖಾಲಿ ಮಾಡಿದ್ದವು. ಉಳಿದ ಮೂರು ಕುಟುಂಬಗಳು ಶುಕ್ರವಾರ ಬೆಳಿಗ್ಗೆ ಮನೆ ಖಾಲಿ ಮಾಡಿದವು. ಒಂದು ಕುಟುಂಬದ ಸದಸ್ಯರು ಪ್ರತಿರೋಧ ತೋರಿದರೂ, ಪಾಲಿಕೆ ಅಧಿಕಾರಿಗಳು ಪೊಲೀಸರ ರಕ್ಷಣೆ ಪಡೆದು ಮನೆ ತೆರವು ಮಾಡಿಸಿದರು.
ಗ್ಯಾರೇಜ್‌ಗಳಲ್ಲಿ ನಿಂತಿದ್ದ ಬಸ್, ಟ್ರಕ್, ಕಾರುಗಳೂ ಸೇರಿದಂತೆ 40ಕ್ಕೂ ಹೆಚ್ಚು ವಾಹನಗಳನ್ನು ಸ್ಥಳದಿಂದ ತೆರವು ಮಾಡಲಾಯಿತು. ಜಮೀನಿನ ಉಳಿದ ಭಾಗದಲ್ಲಿ ಎರಡು ರಸ್ತೆಗಳಿವೆ. ಮತ್ತೊಂದು ಭಾಗದಲ್ಲಿ ಕಸ ವಿಂಗಡಣೆ ಕೇಂದ್ರವಿದೆ.
‘1994ರಿಂದಲೂ ಈ ಜಮೀನಿಗೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿ ಮತ್ತು ಪಾಲಿಕೆ (ಅಂದು ನಗರಸಭೆ) ನಡುವೆ ವ್ಯಾಜ್ಯವಿತ್ತು. ಹೆಗ್ಗನಹಳ್ಳಿ ಗ್ರಾಮಸ್ಥರು ಸಹ ಜಮೀನು ಸರ್ಕಾರಕ್ಕೆ ಸೇರಬೇಕು ಎಂದು ಮೊಕದ್ದಮೆಯಲ್ಲಿ ಮೂರನೇ ವಾದಿಗಳಾಗಿ ದಾವೆ ಹೂಡಿದ್ದರು. ಈ ಜಮೀನು ಪಾಲಿಕೆಗೆ ಸೇರಬೇಕು ಎಂದು 2015ರ ಡಿಸೆಂಬರ್‌ನಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಜಮೀನನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ’ ಎಂದು ಬಿಬಿಎಂಪಿಯ ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಸಿದ್ದೇಗೌಡ ಅವರು ಮಾಹಿತಿ ನೀಡಿದರು.
ವ್ಯಾಜ್ಯ ನಡೆಯುತ್ತಿದ್ದ ಅವಧಿಯಲ್ಲಿ ಈ ಜಮೀನಿನ ಅರ್ಧಕ್ಕೂ ಹೆಚ್ಚು ಭಾಗವನ್ನು ಬೇರೆ ಬೇರೆ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು. ಹೈಕೋರ್ಟ್ ತೀರ್ಪಿನ ನಂತರ ಸರ್ವೆ ಮಾಡಿ ಜಮೀ ನಿನ ಗಡಿ ಗುರುತಿಸಲಾಗಿತ್ತು. ಮನೆ ಮತ್ತು ಅಂಗಡಿಗಳನ್ನು ಖಾಲಿ ಮಾಡುವಂತೆ ಒತ್ತುವರಿದಾರರಿಗೆ ಎರಡು ದಿನಗಳ ಮೊದಲೇ ತಿಳಿಸಲಾಗಿತ್ತು ಎಂದರು.
ಮೈಸೂರು ವಿ.ವಿಗೆ ದಾನ: ಹೆಗ್ಗನಹಳ್ಳಿ ಗ್ರಾಮದ ಜೋಡುದಾರರಾಗಿದ್ದ ಹಲಸಿಂಗಾಚಾರ್ಯ ಎಂಬುವವರು ಈ ಜಮೀನನ್ನು 1954ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ದಾನ ನೀಡಿದ್ದರು. ಈ ಬಗ್ಗೆ ಕಂದಾಯ ಇಲಾಖೆ ಬಳಿ ದಾಖಲೆಗಳಿವೆ ಎಂದು ದಾಸರಹಳ್ಳಿ ನಗರಸಭೆಯ ಮಾಜಿ ಸದಸ್ಯ ವೈ.ಬಿ. ಶಾಮಣ್ಣ ಹೇಳಿದರು.
‘ಇದೇ ಜಮೀನಿನ ಪಕ್ಕದಲ್ಲಿ ನಾರಾಯಣಪ್ಪ ಎಂಬುವವರಿಗೆ ಸೇರಿದ ಒಂದು ಗುಂಟೆ ಹೊಲ ಇತ್ತು. ಆದರೆ ಅವರು 1993ರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜೋಡುದಾರರು ದಾನ ನೀಡಿದ್ದ ಜಮೀನಿಗೂ ಬೇಲಿ ಹಾಕಲು ಮುಂದಾಗಿದ್ದರು. ಆಗ ನಾರಾಯಣಪ್ಪ ಮತ್ತು ಗ್ರಾಮಸ್ಥರಿಗೂ ಹೊಡೆದಾಟ ಆಗಿತ್ತು’ ಎಂದು ತಿಳಿಸಿದರು.
‘ಗ್ರಾಮಸ್ಥರೆಲ್ಲಾ ಒಟ್ಟುಗೂಡಿ ಅಂದಿನ ನಗರಸಭೆಗೆ ದೂರು ನೀಡಿದ್ದೆವು. ಆನಂತರ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 1994ರಿಂದ ಇಲ್ಲಿಯವರೆಗೂ ವ್ಯಾಜ್ಯ ನಡೆಯಿತು. ಕಳೆದ ಡಿಸೆಂಬರ್‌ನಲ್ಲಿ ಹೈಕೋರ್ಟ್ ತೀರ್ಪು ನಮ್ಮ ಪರವಾಗಿ ಬಂತು. ಇದು ನಮ್ಮ ಗ್ರಾಮಸ್ಥರಿಗೆ ಸಿಕ್ಕ ಗೆಲುವು’ ಎಂದು ಹರ್ಷದಿಂದ ಹೇಳಿದರು.
ಕಾಂಪೌಂಡ್ ನಿರ್ಮಾಣ ಆರಂಭ: ಒತ್ತುವರಿ ತೆರವು ಮಾಡಿರುವ ಜಮೀನಿನ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗುತ್ತದೆ. ಅದಕ್ಕೆ ಈಗಾಗಲೇ ₹ 20 ಲಕ್ಷ ಮಂಜೂರು ಆಗಿದೆ. ಇವತ್ತಿನಿಂದಲೇ ಕಾಮಗಾರಿಯನ್ನೂ ಆರಂಭಿಸಲಾಗಿದೆ ಎಂದು ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಸಿದ್ದೇಗೌಡ ತಿಳಿಸಿದರು.
ಜಮೀನಿನ ಒಂದು ಭಾಗದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತದೆ. ಎರಡು ತಿಂಗಳ ಒಳಗೆ ಕಾಮಗಾರಿ ಮುಗಿಸಲಾಗುತ್ತದೆ ಎಂದು ಅವರು ಹೇಳಿದರು.
*
ಎರಡು ದಿನದ ಹಿಂದಷ್ಟೇ ಹೇಳಿದ್ದರು
ಮನೆ ಖಾಲಿ ಮಾಡುವಂತೆ ಎರಡು ದಿನದ ಹಿಂದೆಯಷ್ಟೇ ಹೇಳಿದ್ದರು. ಎರಡೇ ದಿನದಲ್ಲಿ ಏನೂ ವ್ಯವಸ್ಥೆ ಮಾಡಿಕೊಳ್ಳಲು ಆಗಲಿಲ್ಲ. ಇವತ್ತು ಏಕಾಏಕಿ ಬಂದು ಮನೆ ಒಡೆಯುತ್ತಿದ್ದಾರೆ. ಎಲ್ಲರೂ ಬೀದಿಗೆ ಬಿದ್ದಿದ್ದೇವೆ ಎಂದು ಗೋಳು ತೋಡಿಕೊಂಡರು ಝರೀನ್ ತಾಜ್.
20 ವರ್ಷಗಳಿಂದ ಇಲ್ಲೇ ಇದ್ದೇವೆ. ಇನ್ನೊಂದೆರಡು ದಿನ ಸಮಯ ಕೊಟ್ಟಿದ್ದರೂ ಸ್ವಲ್ಪ ಅನುಕೂಲ ಆಗುತ್ತಿತ್ತು ಎಂದು ಅವರು ನಿಟ್ಟುಸಿರು ಬಿಟ್ಟರು.
ಪಾಲಿಕೆ ಅಧಿಕಾರಿಗಳು ತೆರವು ಮಾಡಿಸಿರುವ ಷೆಡ್‌ಗಳು ಮತ್ತು ಗ್ಯಾರೇಜ್‌ಗಳಲ್ಲಿ ಉಳಿದಿದ್ದ ವಸ್ತುಗಳನ್ನು ಸಂಬಂಧಪಟ್ಟವರು ಸಂಗ್ರಹಿಸಿಕೊಳ್ಳುತ್ತಿದ್ದರು. ಷೆಡ್‌ಗಳಿಗೆ ತೀರಾ ಹಾನಿಯಾಗಿರುವುದರಿಂದ ಅವನ್ನು ಗುಜರಿಗೆ ಹಾಕದೆ ವಿಧಿಯಿಲ್ಲ ಎಂದು ಟಿಂಕರ್ ಷಾಪ್ ಒಂದರ ಮಾಲೀಕ ಫಯಾಜ್ ಹೇಳಿದರು.
*
ಸಿಹಿ ಹಂಚಿ ಸಂಭ್ರಮ
ಜಮೀನು ಸರ್ಕಾರದ ವಶಕ್ಕೆ ಬಂದದ್ದರ ಬಗ್ಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಶುಕ್ರವಾರ ಒತ್ತುವರಿ ತೆರವು ಆಗುತ್ತಿದಂತೆ ಕೆಲವು ಗ್ರಾಮಸ್ಥರು ಸಿಹಿ ತಂದು ಸ್ಥಳದಲ್ಲಿ ನೆರೆದಿದ್ದವರಿಗೆ ಹಂಚಿದರು.
‘1993ರಲ್ಲಿ ಹೊಡೆದಾಟ ಆಗಿದ್ದಾಗ ಗ್ರಾಮದ ಆರು ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ನನ್ನ ವಿರುದ್ಧವೂ ನಾಲ್ಕು ಪ್ರಕರಣ ದಾಖಲಾಗಿತ್ತು. ನನ್ನನ್ನು ರೌಡಿಪಟ್ಟಿಗೂ ಸೇರಿಸಿದರು. ಈಗ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ಹೀಗಾಗಿ ಎಲ್ಲರಿಗೂ ಸಿಹಿ ಹಂಚುತ್ತಿದ್ದೇನೆ’ ಎಂದು ಆರ್.ರಂಗಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.