ADVERTISEMENT

ಹೈಕೋರ್ಟ್‌ನಿಂದ ಬಿಬಿಎಂಪಿ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಬೆಂಗಳೂರು:ಭಿಕ್ಷುಕರ ಕಲ್ಯಾಣಕ್ಕಾಗಿ ಸಂಗ್ರಹಿಸುತ್ತಿರುವ ಸೆಸ್ ಮೊತ್ತವನ್ನು ತನ್ನ ಬಳಿಯೇ ಬಾಕಿ ಉಳಿಸಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಬಾಕಿ ಉಳಿದಿರುವ 29.80 ಕೋಟಿ ರೂಪಾಯಿಯನ್ನು ಎರಡು ವಾರದೊಳಗೆ `ಕೇಂದ್ರ ಪರಿಹಾರ ನಿಧಿ~ಗೆ ಸಂದಾಯ ಮಾಡುವಂತೆ ಗುರುವಾರ ಆದೇಶಿಸಿದೆ.

ಬಿ.ಕೃಷ್ಣಭಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ವಿಭಾಗೀಯ ಪೀಠ, `ಭಿಕ್ಷುಕರ ಹಣವನ್ನು ಪಾಲಿಕೆ ಬಳಸಿಕೊಳ್ಳುವುದು `ತಾತ್ಕಾಲಿಕ ದುರುಪಯೋಗ~ ಆಗುತ್ತದೆ. ಎರಡು ವಾರದೊಳಗೆ ಬಾಕಿ ಮೊತ್ತವನ್ನು ಕೇಂದ್ರ ಪರಿಹಾರ ನಿಧಿಗೆ ಪಾವತಿಸದೇ ಇದ್ದರೆ ಬಿಬಿಎಂಪಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ~ ಎಂದು ಎಚ್ಚರಿಕೆ ನೀಡಿತು.

1976ರ ಆಗಸ್ಟ್ 30ರ ಸರ್ಕಾರಿ ಆದೇಶದ ಪ್ರಕಾರ ಬಿಬಿಎಂಪಿ ಆಸ್ತಿ ತೆರಿಗೆಯ ಜೊತೆ ಭಿಕ್ಷುಕರ ಕಲ್ಯಾಣ ಸೆಸ್ ಮೊತ್ತವನ್ನೂ ವಸೂಲಿ ಮಾಡಬೇಕು. ಸೆಸ್‌ನ ಶೇಕಡ 10ರಷ್ಟನ್ನು ಪಾಲಿಕೆ ಆಡಳಿತಾತ್ಮಕ ವೆಚ್ಚವಾಗಿ ಪಡೆಯಬೇಕು. ಶೇ 90ರಷ್ಟನ್ನು ಕೇಂದ್ರ ಪರಿಹಾರ ನಿಧಿಗೆ ಪಾವತಿಸಬೇಕು. ಆದರೆ, ಪಾಲಿಕೆ ಸೆಸ್ ಮೊತ್ತವನ್ನು ನಿಧಿಗೆ ಸಂದಾಯ ಮಾಡದೇ ತನ್ನ ಬಳಿಯಲ್ಲೇ ಉಳಿಸಿಕೊಳ್ಳುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದರು.

ಆಗ ಪಾಲಿಕೆ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ಕೇಹರ್, `ಭಿಕ್ಷುಕರ ಹಣವನ್ನು ಪಾಲಿಕೆ ಸ್ವಂತಕ್ಕೆ ಬಳಸಿಕೊಳ್ಳಲು ಹೇಗೆ ಸಾಧ್ಯ? ಪಾಲಿಕೆಗೆ ಸೆಸ್ ಸಂಗ್ರಹಿಸುವ ಜವಾಬ್ದಾರಿ ಮಾತ್ರ ಇದೆ. ಅದು ಒಂದು ರೀತಿಯಲ್ಲಿ ಟ್ರಸ್ಟಿ ಇದ್ದಂತೆ. ಭಿಕ್ಷುಕರ ಹಣವನ್ನು ಬಳಸುವ ಅಧಿಕಾರ ಬಿಬಿಎಂಪಿಗೆ ಇಲ್ಲ. ಪಾಲಿಕೆಯು ಭಿಕ್ಷುಕರ ಹಣವನ್ನು ಇಟ್ಟುಕೊಳ್ಳುವುದು ಕ್ರಿಮಿನಲ್ ಅಪರಾಧವಾಗುತ್ತದೆ~ ಎಂದರು.

ಚೆಕ್‌ಬೌನ್ಸ್ ಕಾರಣ: ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುವವರು ಬಹುತೇಕ ಚೆಕ್‌ನಲ್ಲಿ ನೀಡುತ್ತಾರೆ. ಆದರೆ, ಕೆಲ ಚೆಕ್‌ಗಳು ಖಾತೆಯಲ್ಲಿ ಹಣವಿಲ್ಲದೇ ವಾಪಸಾಗುತ್ತವೆ. ಇದರಿಂದಾಗಿ ನಿಗದಿತ ಮೊತ್ತ ಸಂಗ್ರಹವಾಗುವುದಿಲ್ಲ. ಇದು ಕೇಂದ್ರ ಪರಿಹಾರ ನಿಧಿಗೆ ಬಾಕಿ ಪಾವತಿಸದೇ ಇರುವುದಕ್ಕೆ ಕಾರಣ ಎಂದು ಬಿಬಿಎಂಪಿ ಪರ ವಕೀಲರು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ಆದರೆ, ಪಾಲಿಕೆಯ ವಾದವನ್ನು ಹೈಕೋರ್ಟ್ ತಳ್ಳಿಹಾಕಿತು. ನ್ಯಾಯಾಲಯ, `ಸಂಗ್ರಹವಾಗಿರುವ ಹಣದಲ್ಲಿ ಅರ್ಧದಷ್ಟು ನಿಮ್ಮ ಬಳಿಯೇ ಇದೆ. ತಕ್ಷಣವೇ ನಿಧಿಗೆ ಬಾಕಿ ಸಂದಾಯ ಆಗಬೇಕು. ಇಲ್ಲವಾದರೆ ಪಾಲಿಕೆಯ ಕಟ್ಟಡ, ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸುತ್ತೇವೆ~ ಎಂದು ಗಂಭೀರ ಎಚ್ಚರಿಕೆ ನೀಡಿತು.

ಬಾಕಿ ಮೊತ್ತ ಪಾವತಿಗೆ ಎರಡು ವಾರಗಳ ಗಡುವು ನೀಡಿದ ಹೈಕೋರ್ಟ್, ಸೆಸ್ ಸಂಗ್ರಹದ ಬಗ್ಗೆ ನಾಲ್ಕು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಿತು. ಪ್ರತಿ ಮೂರು ತಿಂಗಳಿಗೊಮ್ಮೆ ಸೆಸ್ ಮೊತ್ತವನ್ನು ಪರಿಹಾರ ನಿಧಿಗೆ ಸಂದಾಯ ಮಾಡುವಂತೆಯೂ ನಿರ್ದೇಶನ ನೀಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.