ADVERTISEMENT

ಹೊಸಕೆರೆಹಳ್ಳಿ: 50 ಅಕ್ರಮ ಅಂಗಡಿ ಮಳಿಗೆಗಳ ನೆಲಸಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2011, 19:20 IST
Last Updated 1 ಆಗಸ್ಟ್ 2011, 19:20 IST
ಹೊಸಕೆರೆಹಳ್ಳಿ: 50 ಅಕ್ರಮ ಅಂಗಡಿ ಮಳಿಗೆಗಳ ನೆಲಸಮ
ಹೊಸಕೆರೆಹಳ್ಳಿ: 50 ಅಕ್ರಮ ಅಂಗಡಿ ಮಳಿಗೆಗಳ ನೆಲಸಮ   

ಬೆಂಗಳೂರು:  ನಗರದ ಹೊಸಕೆರೆಹಳ್ಳಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಸುಮಾರು 50 ಅಂಗಡಿ, ಮಳಿಗೆಗಳ ಕಟ್ಟಡಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೋಮವಾರ ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿತು.

ಆರಂಭದಲ್ಲಿ ಅಂಗಡಿ ಮಾಲೀಕರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಇದರಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದುದನ್ನು ಗಮನಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಹೊಸಕೆರೆಹಳ್ಳಿಯ ಸರ್ವೆ ನಂ. 106ರಲ್ಲಿ ವಿಶ್ವ ಭಾರತಿ ಹೌಸಿಂಗ್ ಸೊಸೈಟಿಗೆ ಸೇರಿದ ಜಾಗದಲ್ಲಿ ಕೆಲವರು ಅಕ್ರಮವಾಗಿ ಮನೆ, ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಕಟ್ಟಡಗಳನ್ನು ನೆಲಸಮಗೊಳಿಸಲು ಬಿಡಿಎ ಬೆಳಿಗ್ಗೆ 9 ಗಂಟೆಗೆ ಕಾರ್ಯಾಚರಣೆ ಆರಂಭಿಸಿದಾಗ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಸ್ಥಳೀಯರ ಪ್ರತಿಭಟನೆಯನ್ನೂ ಲೆಕ್ಕಿಸದೆ ಅಧಿಕಾರಿಗಳು ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಮುಂದುವರೆಸಿದರು. ಈ ಹಂತದಲ್ಲಿ ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. `ಯಾವುದೇ ಕಾರಣಕ್ಕೂ ಮನೆ- ಅಂಗಡಿಗಳನ್ನು ನೆಲಸಮಗೊಳಿಸಲು ಅವಕಾಶ ನೀಡುವುದಿಲ್ಲ~ ಎಂದು ಪಟ್ಟು ಹಿಡಿದು ಸ್ಥಳೀಯರು ಕಾರ್ಯಾಚರಣೆಗೆ ಅಡ್ಡಿಪಡಿಸಿದರು.

ಸ್ಥಳೀಯರ ಆಕ್ರೋಶ: ಬಿಡಿಎ ಅಧಿಕಾರಿಗಳು ಮನೆ ಹಾಗೂ ಕಟ್ಟಡಗಳನ್ನು ಏಕಾಏಕಿ ಕೆಡವಿದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. `ಕಟ್ಟಡಗಳನ್ನು ತೆರವುಗೊಳಿಸದಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಅಧಿಕಾರಿಗಳು ಯಾವುದನ್ನೂ ಲೆಕ್ಕಿಸದೆ ಮನೆ- ಅಂಗಡಿಗಳನ್ನು ನೆಲಸಮಗೊಳಿಸಿದ್ದಾರೆ~ ಎಂದು ಅವರು ಆರೋಪಿಸಿದರು. ಆದರೆ, ಈ ಕುರಿತು ಸ್ಪಷ್ಟನೆ ಬಯಸಿ ಸಂಬಂಧಪಟ್ಟ ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.