ADVERTISEMENT

ಹೊಸಕೋಟೆ ಅಪಘಾತ: ಶವಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:58 IST
Last Updated 4 ಡಿಸೆಂಬರ್ 2012, 19:58 IST

ಹೊಸಕೋಟೆ: ತಾಲ್ಲೂಕಿನ ಚಿಂತಾಮಣಿ ರಸ್ತೆಯಲ್ಲಿರುವ ಕೆ.ಸತ್ಯಾವರ ಗ್ರಾಮದ ಬಳಿ ಸೋಮವಾರ ಸಂಜೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಮತ್ತು ಮಿನಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆಸಿ, ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು.

ಅಪಘಾತದಲ್ಲಿ ಗಾಯಗೊಂಡಿರುವ ಚೋಳಪ್ಪನಹಳ್ಳಿಯ ಅನ್ವರ್ ಪಾಷಾ, ಹೇಮಾರನಹಳ್ಳಿಯ ಪ್ರಭಾಕರ್, ನಂದಗುಡಿಯ ಶ್ರೀನಿವಾಸ್, ಭೀಮಾರನಹಳ್ಳಿಯ ನವೀನ್‌ಕುಮಾರ್, ಹಿಂಡಿಗನಾಳದ ಆಯಾನ್‌ತಾಜ್, ಹೊಸಕೋಟೆಯ ಶೈಲಜಾ, ನಿಂಬೇಕಾಯಿಪುರದ ಚಲಪತಿ, ಕಟ್ಟಿಗೇನಹಳ್ಳಿಯ ಮುತಾಬುಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಂದಗುಡಿಯ ಚೌಡಪ್ಪ ಹಾಗೂ ಮತ್ತಿಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಚಿವ ಬಿ.ಎನ್.ಬಚ್ಚೇಗೌಡ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು ಮತ್ತು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, `ಮೃತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಆದಷ್ಟು ಬೇಗ ಕಲ್ಪಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ' ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಆರಂಭಿಸುವ ಬಗ್ಗೆ ಹಾಗೂ ಹೆಚ್ಚಿರುವ ಮ್ಯಾಕ್ಸಿ ಕ್ಯಾಬ್ ಹಾವಳಿ ನಿಯಂತ್ರಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮೃತರ ಕುಟುಂಬದವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದು, ತಕ್ಷಣ 15 ಸಾವಿರ ರೂಪಾಯಿಗಳ ಪರಿಹಾರ ಹಣದ ಚೆಕ್ ವಿತರಿಸಿದರು.

ಗ್ರಾಮದಲ್ಲಿ ಸೂತಕದ ಛಾಯೆ
ಅಪಘಾತದಲ್ಲಿ ಸಾವನ್ನಪ್ಪಿದ ಹನ್ನೊಂದು ಮಂದಿಯಲ್ಲಿ ಮೂವರು ನಂದಗುಡಿ ಗ್ರಾಮದವರೇ ಆಗಿದ್ದು, ಘಟನೆಯಿಂದಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತರು ಹಲವು ವರ್ಷಗಳಿಂದ ಅಕ್ಕಪಕ್ಕದ ಮನೆಗಳಲ್ಲೇ ನೆಲೆಸಿದ್ದರು.

ಅಪಘಾತದಲ್ಲಿ ಸಾವನ್ನಪ್ಪಿದ ಮಿನಿ ಬಸ್ ಚಾಲಕ ಮಹಾದೇವಯ್ಯ (48) ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕುಟುಂಬಕ್ಕೆ ಆಧಾರವಾಗಿದ್ದ ಮಹಾದೇವಯ್ಯ ಅವರನ್ನು ಕಳೆದುಕೊಂಡ ಕುಟುಂಬ ಸದಸ್ಯರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

ಅವರ ಪತ್ನಿ ಗಾಯಿತ್ರಿ, ಮಕ್ಕಳಾದ ಕಾವ್ಯ ಮತ್ತು ಕಾರ್ತಿಕ್ ರೋದನೆ ಮುಗಿಲು ಮುಟ್ಟಿದೆ.

ದುರಂತದಲ್ಲಿ ಮೃತಪಟ್ಟ ಸಿದ್ದ ಉಡುಪು ಕಾರ್ಖಾನೆಯ ಪವಿತ್ರಾ (18) ಮತ್ತು ದಿಲ್ಶಾದ್  (40) ಸಹ ಬಡ ಕುಟುಂಬದಿಂದಲೇ ಬಂದವರು. ಜೀವನ ನಿರ್ವಹಣೆ ಜವಬ್ದಾರಿ ಚಿಕ್ಕ ವಯಸ್ಸಿನಲ್ಲಿಯೇ ಇವರ ಮೇಲೆ ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT