ADVERTISEMENT

ಹೊಸಕೋಟೆ: ಗುಂಪು ಘರ್ಷಣೆ, ಲಾಠಿ ಪ್ರಹಾರ

ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 20:00 IST
Last Updated 12 ಏಪ್ರಿಲ್ 2013, 20:00 IST

ಹೊಸಕೋಟೆ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್.ನಾಗರಾಜ್ ಶುಕ್ರವಾರ ನಾಮಪತ್ರ ಸಲ್ಲಿಸಿದರು. ತಿರುವರಂಗ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನೀತಿ ಸಂಹಿತೆಯ ಕಾರಣ ಅವರು ಮೆರವಣಿಗೆಯಲ್ಲಿ ಬರದೆ ಕಾಂಗ್ರೆಸ್ ಕಚೇರಿಯಿಂದ ನೇರವಾಗಿ ಕಾರಿನಲ್ಲಿ ತಾಲ್ಲೂಕು ಕಚೇರಿಗೆ ಬಂದರು. ಇದಕ್ಕೂ ಮುಂಚೆ ನಾಗರಾಜ್ ಪಟ್ಟಣದ ಅವಿಮುಕ್ತೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರಲ್ಲದೆ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಗುಂಪು ಘರ್ಷಣೆ: ತಾಲ್ಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುವರಂಗ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ, ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ನಾಗರಾಜ್ ಅವರ ಕಾರು ಸೇರಿದಂತೆ ಇತರ ಮೂರು ಕಾರುಗಳು ಜಖಂಗೊಂಡಿವೆ. ಘರ್ಷಣೆಯಲ್ಲಿ ನಾಲ್ವರಿಗೆ ಪೆಟ್ಟಾಗಿದೆ.

ಪೊಲೀಸರ ಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿತು. `ಕಾಂಗ್ರೆಸ್ ಅಭ್ಯರ್ಥಿ ತಿರುವರಂಗ ಗ್ರಾಮಕ್ಕೆ ಬಂದಾಗ ಅದೇ ಗ್ರಾಮಕ್ಕೆ ಸೇರಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿ.ನಾರಾಯಣಸ್ವಾಮಿ ಹಾಗೂ ಇತರರು ಹಲ್ಲೆ ಕೃತ್ಯ ನಡೆಸಿದರು' ಎಂದು ಮಂಜುನಾಥಗೌಡ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರತಿ ದೂರು ನೀಡಿರುವ ಜಿ.ಪಂ.ಅಧ್ಯಕ್ಷ ವಿ.ನಾರಾಯಣಸ್ವಾಮಿ, `ಗುಂಪು ಕಟ್ಟಿಕೊಂಡು ಬಂದ ಕಾಂಗ್ರೆಸ್ ಅಭ್ಯರ್ಥಿ ಮೊದಲು ನನ್ನ ಮನೆಯ ಮುಂದೆ ನಿಂತು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದರು' ಎಂದು ತಿಳಿಸಿದ್ದಾರೆ.

ಲಾಠಿ ಪ್ರಹಾರ: ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಅನುಗೊಂಡನಹಳ್ಳಿ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಜಿ.ಪಂ.ಅಧ್ಯಕ್ಷ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಉದ್ರಿಕ್ತ ಗುಂಪು ಪೊಲೀಸರ ಕರ್ತವ್ಯಕ್ಕೆ ಅಡ್ಡಿಮಾಡಿ ಠಾಣೆ ಮುಂದೆ ಗಲಾಟೆ ನಡೆಸಿದಾಗ ಪೊಲೀಸರು ಲಾಠಿಪ್ರಹಾರ ಮಾಡಿ ಗುಂಪನ್ನು ಚದುರಿಸಿದರು. ಈ ಸಂದರ್ಭದಲ್ಲಿ ನಾಲ್ವರು ಕಾನ್‌ಸ್ಟೆಬಲ್‌ಗಳು ಗಾಯಗೊಂಡರು. ನೀತಿಸಂಹಿತೆ ಉಲ್ಲಂಘನೆ ಸೇರಿದಂತೆ ಘಟನೆ ಸಂಬಂಧ ಲಕ್ಷ್ಮಣಗೌಡ ಹಾಗೂ 27 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.