ADVERTISEMENT

ಹೊಸ ಸಂಶೋಧನೆಗೆ ವಿಫುಲ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಬೆಂಗಳೂರು: `ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ತೀವ್ರಗತಿಯ ಬೆಳವಣಿಗೆ ಪರಿಣಾಮದಿಂದ ಹೆಚ್ಚು ಹೆಚ್ಚು ಜೀವಸತ್ವ ಹಾಗೂ ನ್ಯೂಕ್ಲಿಕ್ ಆಸಿಡ್‌ಗಳ ಸಂಚರನೆ (ಮೂರು ಆಯಾಮ)ಯ ಮಹತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿದೆ~ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಕುರ್ತ್ ವುಟ್ರಿಚ್ ಪ್ರತಿಪಾದಿಸಿದರು.

ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ `ಭೌತಶಾಸ್ತ್ರ ಮತ್ತು ಭೌತ ರಸಾಯನಶಾಸ್ತ್ರ ಜೀವಸತ್ವಗಳ ಶೋಧ~ ಕುರಿತು ಅವರು ಉಪನ್ಯಾಸ ನೀಡಿದರು.

`1990ರಲ್ಲಿ ಜೀವಸತ್ವ ಹಾಗೂ ನ್ಯೂಕ್ಲಿಕ್ ಆಸಿಡ್‌ಗಳ ಸಂರಚನೆ 109 ಆಗಿತ್ತು. 1995ರಲ್ಲಿ 500ಕ್ಕೆ, 2000ರ ವೇಳೆಗೆ 1,000ಕ್ಕೆ, 2012ರ ಹೊತ್ತಿಗೆ ಈ ಸಂಚರನೆ 74 ಸಾವಿರಕ್ಕೆ ಏರಿತ್ತು. ಈ ಮೂಲಕ ಸಂರಚನೆಯ ಮಹತ್ವ ಅರಿವಾಗುತ್ತದೆ~ ಎಂದು ಅವರು ಪವರ್ ಪಾಯಿಂಟ್ ಪ್ರೆಸೆಂಟೆಷನ್ ಮೂಲಕ ವಿವರಿಸಿದರು.

`ಭೌತಶಾಸ್ತ್ರ ಹಾಗೂ ಭೌತರಸಾಯನಶಾಸ್ತ್ರ ಕ್ಷೇತ್ರದಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ತೀವ್ರಗತಿಯ ಪ್ರಗತಿಯಾಗಿದ್ದು, ಹೊಸ ವಿಚಾರಗಳ ಸಂಶೋಧನೆಗೆ ವಿಫುಲ ಅವಕಾಶಗಳಿವೆ. ಯುವ ವಿಜ್ಞಾನಿಗಳು, ವಿಜ್ಞಾನದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು~ ಎಂದು ಅವರು ಸಲಹೆ ನೀಡಿದರು.

`2000- 2011ರ ಅವಧಿಯಲ್ಲಿ ಸಂಶೋಧನೆ ಮೂಲಕ 29,723 ಜೀವಸತ್ವ ತದ್ರೂಪಿಗಳನ್ನು ಸೃಷ್ಟಿಸಲಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಇದೊಂದು ಮಹತ್ವದ ಬೆಳವಣಿಗೆ~ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಕೆ. ಬಲರಾಮ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.