ಬೆಂಗಳೂರು: ‘ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳ ವಹಿವಾಟಿನ ಅವಧಿಯನ್ನು ರಾತ್ರಿ ಒಂದು ಗಂಟೆವರೆಗೆ ವಿಸ್ತರಣೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ತಿಳಿಸಿದ್ದಾರೆ.
‘ನಗರದಲ್ಲಿ ಬಾರ್, ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳ ವಹಿವಾಟಿನ ಅವಧಿಯನ್ನು ವಿಸ್ತರಿಸುವ ಸಂಬಂಧ ಫೆ.22ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಸಾರ್ವಜನಿಕರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ವಹಿವಾಟಿನ ಅವಧಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು. ನಂತರ ವಹಿವಾಟಿನ ಅವಧಿಯನ್ನು ಮೂರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬರಲಾಯಿತು’ ಎಂದು ಔರಾದಕರ್ ಹೇಳಿದ್ದಾರೆ.
‘ಸಾರ್ವಜನಿಕರಿಗೆ ಊಟಕ್ಕೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳ ವಹಿವಾಟಿನ ಅವಧಿ ವಿಸ್ತರಣೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ನಿಲ್ದಾಣ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿರುವ ಹೋಟೆಲ್‌ಗಳನ್ನು ದಿನದ 24 ಗಂಟೆಯೂ ತೆರೆಯಲು ಅವಕಾಶ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
.....
‘ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳು ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಒಂದು ಗಂಟೆಯವರೆಗೆ ತೆರೆಯಬಹುದು. ನಂತರದ ಅವಧಿಯಲ್ಲಿ ವಹಿವಾಟು ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು. ಈ ಆದೇಶವು 90 ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ’
-ರಾಘವೇಂದ್ರ ಔರಾದಕರ್, ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.