ADVERTISEMENT

‘ಅನಗತ್ಯ ಯೋಜನೆಗಳಿಗೆ ಮುಂದಾದರೆ ಕೆಲಸಕ್ಕೆ ಕುತ್ತು’

1,367 ಕಾಮಗಾರಿಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:55 IST
Last Updated 16 ಡಿಸೆಂಬರ್ 2013, 19:55 IST
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಾರ್ಡ್‌ಮಟ್ಟದ ಕಾಮಗಾರಿ ಕೈಗೊಳ್ಳಲು ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಗುತ್ತಿಗೆದಾರರಿಗೆ ಕಾರ್ಯದ ಆದೇಶ ನೀಡಿದರು
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಾರ್ಡ್‌ಮಟ್ಟದ ಕಾಮಗಾರಿ ಕೈಗೊಳ್ಳಲು ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಗುತ್ತಿಗೆದಾರರಿಗೆ ಕಾರ್ಯದ ಆದೇಶ ನೀಡಿದರು   

ಬೆಂಗಳೂರು: ‘ಅನಗತ್ಯ ಕಾಮಗಾರಿ­ಗಳಿಗೆ ಅನುಮೋದನೆ ನೀಡಿದರೆ ಅಂತಹ ಎಂಜಿನಿಯರ್‌ಗಳನ್ನು ಆ ಕ್ಷಣವೇ ಮನೆಗೆ ಕಳುಹಿಸುವೆ’ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿ­ನಾರಾಯಣ ಎಚ್ಚರಿಕೆ ನೀಡಿದರು.

ಏಕಕಾಲಕ್ಕೆ 1,367 ವಾರ್ಡ್‌­ಮಟ್ಟದ ಕಾಮಗಾರಿಗಳಿಗೆ ಸೋಮ­ವಾರ ಕಾರ್ಯದ ಆದೇಶ ನೀಡುವ ಸಮಾರಂಭದಲ್ಲಿ ಅವರು ಮಾತ­ನಾಡಿ, ‘ಬಿಬಿಎಂಪಿ ಆರ್ಥಿಕ ಸ್ಥಿತಿ ಮೊದಲೇ ಕೆಟ್ಟದಾಗಿದೆ. ಅನಗತ್ಯ ಕಾಮಗಾರಿಗಳಿಗೆ ಹುಸಿ ಅಂದಾಜು ಪತ್ರ ಸಿದ್ಧಪಡಿಸಿದ ಎಂಜಿನಿಯರ್‌­ಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಎಂದರು.

ಬಿಬಿಎಂಪಿ ಸದಸ್ಯರೂ ಅಷ್ಟೇ. ಯಾವ ಕಾಮಗಾರಿಗಳು ತುರ್ತಾಗಿ ಅಗತ್ಯ­ವಿದೆಯೋ, ಅಂಥವುಗಳ ಪ್ರಸ್ತಾ­ವ­ವನ್ನೇ ಆದ್ಯತೆ ಮೇರೆಗೆ ತರಬೇಕು ಎಂದು ಹೇಳಿದರು.

ಮೇಯರ್‌ ಬಿ.ಎಸ್‌. ಸತ್ಯನಾರಾ­ಯಣ, ‘ಮುಂದಿನ ಸೋಮವಾರವೇ ಎಲ್ಲ ಕಾಮಗಾರಿಗಳಿಗೂ ಚಾಲನೆ ನೀಡಬೇಕು. ಸಚಿವರಿಗೆ ಕಾಯದೆ ಶಾಸಕರು, ವಾರ್ಡ್‌ ಸದಸ್ಯರ ಉಪಸ್ಥಿತಿಯಲ್ಲಿ ಭೂಮಿ­ಪೂಜೆ ನೆರ­ವೇರಿ­ಸ­ಬೇಕು’ ಎಂದು ಸೂಚಿಸಿದರು.

‘ಕೆ.ಆರ್‌. ಮಾರುಕಟ್ಟೆ ಸ್ವಚ್ಛತಾ ಆಂದೋಲನಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅದನ್ನು ಸೂಪರ್‌ ಮಾರು­ಕಟ್ಟೆ­ಗಳ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಕೆ.ಆರ್‌. ಮಾರುಕಟ್ಟೆ­ಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಖಾಸಗಿ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

ಬಿಬಿಎಂಪಿ ಇತ್ತೀಚೆಗೆ ಏಕಗವಾಕ್ಷಿ ಯೋಜನೆ ಮೂಲಕ ರೂ 494 ಕೋಟಿ ಮೊತ್ತದ 2,276 ಕಾಮಗಾರಿಗಳಿಗೆ ಟೆಂಡರ್‌ ಕರೆದಿತ್ತು. ಅರ್ಧದಷ್ಟು ಕಾಮ-­­ಗಾರಿಗಳಿಗೆ ಮಾತ್ರ ಗುತ್ತಿಗೆ­ದಾರರು ಸ್ಪಂದಿಸಿದ್ದರು.

‘ಬಾಕಿ 1,359 ಕಾಮಗಾರಿಗಳಿಗೆ ಮೂರನೇ ಬಾರಿ ಇನ್ನೊಮ್ಮೆ ಟೆಂಡರ್‌ ಕರೆಯಲಾಗುತ್ತದೆ. ಆಗ ಸಹ ಯಾರೂ ಟೆಂಡರ್‌ ಪ್ರಕ್ರಿಯೆ­ಯಲ್ಲಿ ಭಾಗವಹಿಸದಿದ್ದರೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿ­ವೃದ್ಧಿ ಸಂಸ್ಥೆ ಮೂಲಕ ಕಾಮಗಾರಿ ನಡೆಸಲಾಗುವುದು’ ಎಂದು ವಾರ್ಡ್‌­ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್‌. ಬಸವರಾಜು ಹೇಳಿದರು.

ಚರಂಡಿ ನಿರ್ಮಾಣ, ರಸ್ತೆ ದುರಸ್ತಿ, ಫುಟ್‌ಪಾತ್‌ ನಿರ್ಮಾಣ, ಉದ್ಯಾನ ಮತ್ತು ಆಟದ ಮೈದಾನಗಳ ನಿರ್ವಹಣೆ, ಬೀದಿ ದೀಪಗಳ ವ್ಯವಸ್ಥೆ ಮತ್ತಿತರ ಕಾಮಗಾರಿಗಳನ್ನು ವಾರ್ಡ್‌ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.