ADVERTISEMENT

‘ಅಲ್ಪಸಂಖ್ಯಾತರ ಅಭಿವೃದ್ಧಿಗೆ 86 ವಿದ್ಯಾರ್ಥಿ ನಿಲಯ’

ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 20:02 IST
Last Updated 21 ಡಿಸೆಂಬರ್ 2013, 20:02 IST

ಯಲಹಂಕ: ‘ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಗೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ಘಟಕ ಸ್ಥಾಪಿಸಲಾಗಿದ್ದು, ಇದರಡಿಯಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಮತ್ತು  ಕೌಶಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಯೋಜನೆ ಮತ್ತು ಕಾರ್ಯಕ್ರಮಗಳ ಜಾಗೃತಿಗೆ ಸಾತನೂರು ಗ್ರಾಮದ ಡೆಲ್ಲಿ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸ್ವಯಂಸೇವಾ ಸಂಸ್ಥೆಗಳ ದಕ್ಷಿಣ ಪ್ರಾದೇಶಿಕ ಸಮಾವೇಶವನ್ನು ಉದ್ಘಾಟಿಸಿ ಮಾತ ನಾಡಿದರು.

‘ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಎರಡು ಮೊರಾರ್ಜಿ ದೇಸಾಯಿ ಶಾಲೆಗಳು ಹಾಗೂ 86 ನೂತನ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾ ಗುವುದು’ ಎಂದರು.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಸಚಿವ ಕೆ.ರೆಹಮಾನ್‌ಖಾನ್‌ ಮಾತನಾಡಿ, ‘11ನೇ ಪಂಚವಾರ್ಷಿಕ ಯೋಜನೆಯಲ್ಲಿ   ಅಲ್ಪಸಂಖ್ಯಾತರ ಅಭಿವೃದ್ಧಿಗೆ ₨7,000 ಕೋಟಿ ನಿಗದಿಪಡಿಸಲಾಗಿದೆ.  12ನೇ ಪಂಚವಾರ್ಷಿಕ ಯೋಜನೆ ಅವಧಿಗೆ ದನ್ನು ₨17,000 ಕೋಟಿಗೆ ಏರಿಸಲಾಗುವುದು’ ಎಂದು ಹೇಳಿದರು.

ವಕ್ಫ್ ಸಚಿವ ಖಮರುಲ್‌ ಇಸ್ಲಾಂ ಮಾತನಾಡಿ, ‘ಪ್ರಸಕ್ತ ಸಾಲಿನಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗುವ ಸಮುದಾಯದ ವಿದ್ಯಾರ್ಥಿಗಳಿಗೆ ಹಣಕಾಸಿನ ಸೌಲಭ್ಯ ಒದಗಿಸಲಾಗುವುದು’ ಎಂದರು.

ಸಮಿತಿ ರಚನೆ
‘ರಾಷ್ಟ್ರಮಟ್ಟದಲ್ಲಿ ವಕ್ಫ್‌ ಆಸ್ತಿ ರಕ್ಷಣೆಗಾಗಿ ರಾಷ್ಟ್ರೀಯ ವಕ್ಫ್‌ ಅಭಿವೃದ್ಧಿ ಸಮಿತಿ ರಚಿಸಲಾಗಿದ್ದು, ದೇಶದಾದ್ಯಂತ ವಕ್ಫ್‌ ಆಸ್ತಿಯ  ಸಮೀಕ್ಷೆ ಕಾರ್ಯ ಈಗಾಗಲೇ ಆರಂಭವಾಗಿದೆ’ ಎಂದು ಕೆ.ರೆಹಮಾನ್‌ ಖಾನ್‌ ತಿಳಿಸಿದರು.

ಸಮಾರಂಭದ ನಂತರ ಸುದ್ದಿ­ಗಾರ­ರೊಂದಿಗೆ ಮಾತನಾಡಿ, ‘ದೇಶದಾದ್ಯಂತ ಶೇ 50ರಷ್ಟು ವಕ್ಫ್‌ ಆಸ್ತಿ ಒತ್ತುವರಿಯಾಗಿರುವ ಸಾಧ್ಯತೆ­ಯಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಜಿಲ್ಲಾಡಳಿತದ ಮೂಲಕ ಕೈಗೊಂಡಿರುವ ಸರ್ವೆಕಾರ್ಯ ಪೂರ್ಣಗೊಂಡಿದೆ’ ಎಂದರು.

ಕಠಿಣ ಕ್ರಮ: ವಕ್ಫ್‌ ಆಸ್ತಿಯನ್ನು ಒತ್ತುವರಿ ಮಾಡಿರುವವರು ಪ್ರಭಾವಿಗಳಾಗಿದ್ದರೂ   ಜಾಮೀನು­ರಹಿತ ದೂರು ದಾಖಲಿಸ­ಲಾಗುವುದು. ಈ ಕಾರ್ಯ­ಕ್ಕಾಗಿ ಕಾರ್ಯಪಡೆ­ಯಂತಹ ವಿಶೇಷ ಪೊಲೀಸ್‌ ಕಾರ್ಯಪಡೆ ರಚಿಸಬೇಕೆಂದು ರಾಜ್ಯಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT