ADVERTISEMENT

‘ಅಸಂಖ್ಯ ‘ಸಾಮಾನ್ಯ’ ಪ್ರತಿಭೆಗಳ ಗುರುತಿಸಿ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 19:30 IST
Last Updated 10 ಜನವರಿ 2014, 19:30 IST
ನಗರದ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು (ಎಡಚಿತ್ರ), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮುಖ್ಯಸ್ಥ ನಂದನ್‌ ನಿಲೇಕಣಿ ಮಾತನಾಡಿದರು 	–ಪ್ರಜಾವಾಣಿ ಚಿತ್ರಗಳು.
ನಗರದ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು (ಎಡಚಿತ್ರ), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮುಖ್ಯಸ್ಥ ನಂದನ್‌ ನಿಲೇಕಣಿ ಮಾತನಾಡಿದರು –ಪ್ರಜಾವಾಣಿ ಚಿತ್ರಗಳು.   

ಬೆಂಗಳೂರು: ‘ದೇಶದಲ್ಲಿ ಅಸಂಖ್ಯ ಸಂಖ್ಯೆಯ ಪ್ರತಿಭಾವಂತರು ಇದ್ದಾರೆ. ಆದರೆ, ಆ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗುತ್ತಿಲ್ಲ.  ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಉತ್ತಮ ವ್ಯವಸ್ಥೆ ರೂಪುಗೊಳ್ಳಬೇಕಿದೆ’ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮುಖ್ಯಸ್ಥ ನಂದನ್‌ ನಿಲೇಕಣಿ ಅಭಿಪ್ರಾಯಪಟ್ಟರು.

ನಗರದ ಕ್ರೈಸ್ಟ್‌ ವಿಶ್ವವಿದ್ಯಾಲ­ಯದಲ್ಲಿ ಶುಕ್ರವಾರ ನಡೆದ ಸಂವಾದ­ದಲ್ಲಿ ಅವರು ಮಾತನಾಡಿದರು.

‘ನಾನೊಬ್ಬ ಸಾಮಾನ್ಯ ವಿದ್ಯಾರ್ಥಿ­ಯಾಗಿದ್ದೆ. ಪೋಷಕರು ಉತ್ತಮ ಶಾಲೆಗೆ ಸೇರಿಸಿದರು. ಕಠಿಣ ಪರಿಶ್ರಮ ಪಟ್ಟೆ. ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಆಯಿತು. ನನ್ನಂತಹ ಸಾವಿರಾರು ಕಥನಗಳು ದೇಶದಲ್ಲಿ ಇವೆ. ಇದನ್ನು ಗುರುತಿಸುವ ಕೆಲಸ ಆಗಬೇಕು’ ಎಂದು ಅವರು ಸಲಹೆ ನೀಡಿದರು.

‘ನಾವೆಲ್ಲ ಸಮಾನ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಬೇಕು. ನಾವು ಇನ್ಫೋಸಿಸ್‌ ಆರಂಭಿಸಿದಾಗ ಸಮಾನ ಉದ್ದೇಶ ಇಟ್ಟುಕೊಂಡು ಕೆಲಸ ಆರಂಭಿಸಿದೆವು. ಇದೀಗ ಲಕ್ಷಾಂತರ ಮಂದಿಗೆ ಉದ್ಯೋಗ ಕೊಡಲು ಸಾಧ್ಯವಾಗಿದೆ. ಅಧಿಕ ಸಂಖ್ಯೆಯಲ್ಲಿ ಇಂತಹ ಮಾದರಿಗಳ ಅಗತ್ಯ ಇದೆ. ನಾವು ಜೀವನದಲ್ಲಿ ಹೆಚ್ಚು ಹೆಚ್ಚು ಸವಾಲುಗಳನ್ನು ಎದುರಿಸಲು ಸಿದ್ಧ­ರಾಗಬೇಕು’ ಎಂದು  ಪ್ರತಿಪಾದಿಸಿದರು.

‘ಖಾಸಗಿ ಕ್ಷೇತ್ರದಲ್ಲಿ ಪಾಲುದಾರ­ರು, ಗ್ರಾಹಕರು ಹಾಗೂ ಸಿಬ್ಬಂದಿಯನ್ನು ಮಾತ್ರ ತಲುಪಬಹುದು. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಅಸಂಖ್ಯ ಜನರ ಕಷ್ಟಗಳಿಗೆ ಸ್ಪಂದಿಸಬಹುದು’ ಎಂದರು.

‘ಖಾಸಗಿತನಕ್ಕೆ ಧಕ್ಕೆ ಇಲ್ಲ’
‘ಆಧಾರ್‌ನಿಂದ ವ್ಯಕ್ತಿಯ ಖಾಸಗಿ­ತನಕ್ಕೆ ಧಕ್ಕೆ ಉಂಟಾಗು­ವು­ದಿಲ್ಲ. ಅಂತಹ ಯಾವುದೇ ತೊಂದರೆ­ಯಾಗದ ತಂತ್ರಜ್ಞಾನ­ವನ್ನು ಬಳಸಿಕೊಳ್ಳಲಾಗಿದೆ’ ಎಂದು ನಂದನ್‌ ನಿಲೇಕಣಿ ಸ್ಪಷ್ಟಪಡಿಸಿದರು.

ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಐದು ಕೋಟಿ ಜನ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಮೂರು ಕೋಟಿ ಜನ ಪಾನ್‌ ಕಾರ್ಡ್‌ ಹೊಂದಿದ್ದಾರೆ. ಚಾಲನಾ ಪರವಾನಗಿ ಹೊಂದಿರುವವರು 18 ಕೋಟಿ ಮಂದಿ.  ಶೇ 50 ಮಂದಿ ಚುನಾವಣಾ ಗುರುತಿನ ಚೀಟಿ ಹೊಂದಿದ್ದಾರೆ. ‘ಶೇ 50 ಮಂದಿಗೆ ಯಾವುದೇ ಗುರುತಿನ ಚೀಟಿ ಇರಲಿಲ್ಲ. ಇಂತಹವರ ನೆರವಿಗೆ ಆಧಾರ್‌ ರೂಪುಗೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.