ಬೆಂಗಳೂರು: ‘ತಿಂಡಿ, ಊಟ, ನೀರು ಏನು ಕೇಳಬೇಕಾದರೂ ಇಂಗ್ಲಿಷ್‌ನಲ್ಲಿ ಕೇಳಬೇಕು. ನಾನು ಬೆಂಗಳೂರಿನಲ್ಲಿ ಇದ್ದೆನೋ ಅಥವಾ ಬೇರೆಲ್ಲೋ ಇದ್ದೆನೋ ಅನಿಸುತ್ತಿದೆ. ಇದು ಎಂತಹ ಇಕಟ್ಟಿನ ಸ್ಥಿತಿ’ ಹೀಗೆ ಹೇಳಿದವರು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಸಿರಿಗನ್ನಡ–ಹಿಂದೆ, ಇಂದು ಮತ್ತು ಮುಂದೆ’ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಈ ಪರಿಸರದಲ್ಲಿ ಕನ್ನಡದ ಬಗ್ಗೆ ಮಾತನಾಡುವುದೇ ಹಿಂಸೆ ಅನಿಸುತ್ತಿದೆ. ಇಲ್ಲಿ ಕನ್ನಡದ ವಾತಾವರಣವೇ ಇಲ್ಲ. ಕನ್ನಡ ಕೇಳಿಸಿಕೊಳ್ಳದವರಿಗೆ ಕನ್ನಡದ ಬಗ್ಗೆ ತಿಳಿಸುತ್ತಿದ್ದೇವೆ. ಇಡೀ ಉತ್ಸವದ ಬಗ್ಗೆಯೇ ನನಗೆ ಅನುಮಾನಗಳಿವೆ’ ಎಂದರು.
‘ಬರುವ ವರ್ಷವಾದರೂ ಆಯೋಜಕರು ಕನ್ನಡ ಸಂಸ್ಕೃತಿ, ಭಾಷೆಗೆ ಹೆಚ್ಚು ಒತ್ತು ಕೊಡಬೇಕು. ಈ ಉತ್ಸವದ ಮುಖೇನ ಜಗತ್ತಿನೊಂದಿಗೆ ಸಂವಾದ ಸಾಧ್ಯವಾಗುವ ವಾತಾವರಣ ಬೆಳೆಸಬೇಕು’ ಎಂದು ತಿಳಿಸಿದರು.
‘ಇಂಗ್ಲಿಷ್ ಭಾಷೆ ಇಲ್ಲದಿದ್ದರೆ ಸಂಪರ್ಕವೇ ಸಾಧ್ಯ ಇಲ್ಲ ಎಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ. ಇಂತಹ ಉತ್ಸವಗಳು ಅದಕ್ಕೆ ನೀರೆರೆದು ಪೋಷಿಸುತ್ತಿವೆ’ ಎಂದು ಹೇಳಿದರು.
‘ಇಂದು ನಾವು ಕೇವಲ ವಾದದಲ್ಲಿ ಮುಳುಗಿದ್ದೇವೆ. ಸಂವಾದವೇ ಇಲ್ಲದ ಸ್ಥಿತಿ ಸೃಷ್ಟಿಯಾಗಿದೆ. ಮನಸ್ಸು, ಹೃದಯ ರಣರಂಗವಾಗಿದೆ. 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಸಂವಾದ, ಚರ್ಚೆ ನಡೆಸಬೇಕು. ಅದು ಆಗದಿದ್ದರೆ ಸಾಹಿತ್ಯ ಏಕೆ ಬೇಕು’ ಎಂದು ಪ್ರಶ್ನಿಸಿದರು.
‘ಯಾವುದೇ ಭಾಷೆಗೆ ಜ್ಞಾನ ಮತ್ತು ಪರಿಸರದ ನೆಲೆ ಇರುತ್ತದೆ. 12ನೇ ಶತಮಾನದ ವಚನಕಾರರು ಜ್ಞಾನ ಹಾಗೂ ಪರಿಸರದ ಭಾಷೆಯಾಗಿ ಕನ್ನಡವನ್ನು ಬೆಳೆಸಿದ್ದರು. ಆದರೆ ಇಂದು ಇಂಗ್ಲಿಷ್ ಜ್ಞಾನ, ಪರಿಸರದ ಭಾಷೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಇಂಗ್ಲಿಷ್‌ನಲ್ಲಿ ಓದಿದರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ವಾತಾವರಣ ಸೃಷ್ಟಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೂ ಸಂಬಂಧ ಕಲ್ಪಿಸಿರುವುದರಿಂದ ಪ್ರಾದೇಶಿಕ ಭಾಷೆಗಳು ಆತಂಕದ ಸ್ಥಿತಿಗೆ ತಲುಪಿವೆ’ ಎಂದರು.
ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ‘ಕನ್ನಡಕ್ಕೆ ಹಿಂದೆಯೂ ಅಪಾಯ ಇತ್ತು. ಈಗಲೂ ಇದೆ. ಆದರೆ ಎಲ್ಲವನ್ನೂ ಎದುರಿಸಿ ಇಂದಿಗೂ ಜೀವಂತವಾಗಿ ಉಳಿದಿದೆ. ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ’ ಎಂದರು.
‘ಮಾಧ್ಯಮಗಳಿಗೆ ಜವಾಬ್ದಾರಿ ಏಕಿರಬಾರದು’
‘ಮಾಧ್ಯಮಗಳು ಮಾತಿನ ಘನತೆ ಹಾಳು ಮಾಡುತ್ತಿವೆ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯೇ ಇಲ್ಲದಂತೆ ವರ್ತಿಸುತ್ತಿವೆ. ಒಬ್ಬ ನಾಗರಿಕನಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕಾದರೆ ಮಾಧ್ಯಮಗಳಿಗೆ ಏಕಿರಬಾರದು’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಶ್ನಿಸಿದರು.
‘ಮಾಧ್ಯಮಗಳಲ್ಲಿ ಸಾಮಾಜಿಕ ಎಚ್ಚರ ಬರಬೇಕು. ಸಂಸ್ಕೃತಿ, ಭಾಷೆ ಸಾಹಿತಿಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲ ಕ್ಷೇತ್ರದ ಸಂವೇದನಾಶೀಲ ಮನಸ್ಸುಗಳು ಒಂದಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.