ADVERTISEMENT

‘ಚುನಾವಣೆಯಲ್ಲಿ ಜಾತಿ-– ಪ್ರಜಾಪ್ರಭುತ್ವಕ್ಕೆ ಕುತ್ತು’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗ­ಡದವರನ್ನು ಹೊರತು ಪಡಿಸಿ, ಉಳಿದವರಿಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಜಾತಿ ಅಪ್ರಸ್ತುತ’ ಎಂದು ನಿವೃತ್ತ ನ್ಯಾಯ­ಮೂರ್ತಿ ಎಂ. ರಾಮಜೋಯಿಸ್‌ ಅಭಿ­ಪ್ರಾಯಪಟ್ಟರು.

ಬೆಂಗಳೂರು ವಕೀಲರ ಸಂಘ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ‘ಚುನಾ­ವಣಾ ಸುಧಾರಣೆಯ ಅವಶ್ಯಕತೆಗಳು’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕೇವಲ ಜಾತಿ ಕಾರಣ­ದಿಂದಾಗಿ ಬಹಳ ತೊಂದರೆ­ಗಳನ್ನು ಅನುಭವಿಸಿದ್ದಾರೆ. ಅವರ ಪರಿಸ್ಥಿತಿ  ಇನ್ನೂ ಸಂಪೂರ್ಣವಾಗಿ ಸುಧಾರಿಸದ ಕಾರಣ ಅವರಿಗೆ ಜಾತಿಯ ಅಗತ್ಯ ಇದೆ ಎಂದರು.

ಜಾತಿ ವ್ಯವಸ್ಥೆ ಹಿಂದೆ ಕೇವಲ ವಿವಾಹ ಹಾಗೂ ಊಟದ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತಿತ್ತು. ಆದರೆ ಈಗ ಚುನಾವಣೆಗಳಲ್ಲಿ ಮಹತ್ವದ ಪಾತ್ರವನ್ನೇ ವಹಿಸುತ್ತದೆ.   ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಕುತ್ತಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪ­ಡಿಸಿದರು.

ಚುನಾವಣೆಗಳು ಶುದ್ಧವಾಗಿ ನಡೆಯಬೇಕಾದರೆ ಮೊದಲು  ಸಂವಿಧಾನದ 47ನೇ ಕಲಂ ಅನ್ನು  ಸಮರ್ಪಕವಾಗಿ ಜಾರಿಗೆ ತರಬೇಕು.
ಇದರೊಂದಿಗೆ ಚುನಾ­ವಣೆಗಳ ಮೇಲೆ ಜಾತಿ ಪ್ರಭಾವ ಬೀಳದಂತೆ ತಡೆಯುವ ಕಾರ್ಯ ಆಗಬೇಕಿದೆ ಎಂದರು. ಮದ್ಯ ಮತ್ತು ಹಣದ ಪ್ರಭಾವ ಚುನಾವಣೆಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದನ್ನು ತಪ್ಪಿಸಲು ಸೂಕ್ತ ಕಾನೂನನ್ನು ಚುನಾವಣೆಗೆ ಒಂದು ವರ್ಷ ಸಮಯ ಇರುವಾಗಲೇ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು. 

‘ಜನರಿಂದ ಆಯ್ಕೆಯಾಗದ ಪ್ರತಿನಿಧಿಗಳು ರಾಜ್ಯದ ಮುಖ್ಯ ಮಂತ್ರಿ ಮತ್ತು ದೇಶದ ಪ್ರಧಾನಿ ಆಗಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಆದರೂ ನಮ್ಮ ದೇಶದಲ್ಲಿ ರಾಜ್ಯ ಸಭೆಯ ಸದಸ್ಯ ಪ್ರಧಾನಿ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಮುಖ್ಯ ಮಂತ್ರಿಗಳಾಗಿ ಆಡಳಿತ ನಡೆಸುತ್ತಾರೆ. ಇದನ್ನು ಗಮನಿಸಿದರೆ ದೇಶದಲ್ಲಿ ಸಂವಿಧಾನ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಯುತ್ತದೆ’ ಎಂದು ಹೇಳಿದರು.   

ಈ ವಿಷಯ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಯಾರೂ ಪ್ರಶ್ನಿಸುವುದಿಲ್ಲ. ಇದನ್ನೆಲ್ಲ ಗಮನಿಸಿದರೆ ನಿಜವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯ­ಲ್ಲಿದೆಯೇ ಎಂದು ಅನುಮಾನ ಬರುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.