ಬೆಂಗಳೂರು: ‘ಜನರ ಮಧ್ಯೆ ಗುರುತಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಇತಿಹಾಸ ಕೆದಕುತ್ತಿರುವ ಪ್ರವೃತ್ತಿ ಸರಿಯಲ್ಲ’ ಎಂದು ಗದಗ ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಅವರು ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ನಡೆದ ಲೇಖಕ ಎಸ್.ಆರ್. ಕೃಷ್ಣಮೂರ್ತಿ ಅವರ ‘ದಿ ಎನಿಗ್ಮಾಸ್ ಇನ್ ವಾಲ್ಮೀಕಿ ರಾಮಾಯಣ ಎಕ್ಸ್‌ಪ್ಲೇನ್ಡ್’ ಮತ್ತು ‘ದಿ ಸೈನ್ಸ್ ಆಫ್ ಹಿಂದೂಯಿಸಂ’ ಆಂಗ್ಲ ಭಾಷೆ ಪುಸ್ತಕಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕಾವ್ಯ, ಕಾದಂಬರಿ ಬರೆಯು ವವರಿಗೆ ಕಲ್ಪನೆಗೆ ಅವಕಾಶ ಇದೆ. ಆದರೆ, ರಾಮಾಯಣ ಬರೆಯುವಾಗ ಕಲ್ಪಿಸಿ ಬರೆಯಬಾರದು. ಏಕೆಂದರೆ ಅದು ರಾಮನ ಜೀವನಕ್ಕೆ ಸಂಬಂಧಿಸಿದೆ’ ಎಂದು ಹೇಳಿದರು.
‘ಯಾವುದೇ ಲೇಖಕನಾಗಲಿ ಮೂಲಕ್ಕೆ ಅಪಚಾರ ಮಾಡುವ ಕೆಲಸ ಮಾಡಬಾರದು. ರಾಮಾಯಣ ಕೂಡ ಚರಿತ್ರೆಯ ಒಂದು ಭಾಗ ಆಗಿರುವು ದರಿಂದ ಅದರಲ್ಲಿ ಅನಗತ್ಯ ವಿಚಾರ ಗಳನ್ನು ಸೇರಿಸಲು ಪ್ರಯತ್ನಿಸಬಾರದು’ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ಮಾತನಾಡಿ, ‘ಹಿಂದೂ ಧರ್ಮವನ್ನು ಜಾತ್ಯತೀತ ವಿರೋಧಿ ಎಂದು ಹೇಳುವವರಲ್ಲಿ ಯಾವ ರೀತಿಯ ಮೌಢ್ಯ ತುಂಬಿದೆಯೊ ಗೊತ್ತಿಲ್ಲ’ ಎಂದರು.
‘ಎಲ್ಲರನ್ನೂ ಸಮಾನವಾಗಿ ಕಾಣುವಂತೆ ಹಿಂದೂ ಧರ್ಮ ಹೇಳುತ್ತದೆ. ಅಂತಹದ್ದರಲ್ಲಿ ಅದನ್ನು ಜಾತ್ಯತೀತ ವಿರೋಧಿ ಎಂದರೆ ಅದು ಮೌಢ್ಯವಲ್ಲದೆ ಮತ್ತೇನೂ’ ಎಂದು ಪ್ರಶ್ನಿಸಿದರು. ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಡಾ. ಶ್ರೀನಿವಾಸ ವರಖೇಡಿ ಅವರು ಮಾತನಾಡಿ, ‘ಯಾವುದು ಅತ್ಯಂತ ಪವಿತ್ರ ವಾಗಿರುತ್ತದೆಯೊ ಅದು ಪದೇ ಪದೇ ಪರೀಕ್ಷೆಗೆ ಒಳಪಡುತ್ತದೆ. ಅದು ರಾಮಾಯಣ ಹಾಗೂ ರಾಮನ ವಿಷಯದಲ್ಲಿ ಅನೇಕ ಸಲ ಆಗಿದೆ. ನಮ್ಮಲ್ಲಿರುವ ಅಂತಹ ಕೆಲವು ಜಿಜ್ಞಾಸೆಗಳ ಬಗ್ಗೆ ಕೃಷ್ಣಮೂರ್ತಿಯವರು ಅವರ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ’ ಎಂದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಿಘಂಟು ತಜ್ಞ ಜಿ. ವೆಂಕಟಸುಬ್ಬಯ್ಯ ಅವರು, ‘ಕೃಷ್ಣಮೂರ್ತಿಯವರು ಅವರ ಕೃತಿಯಲ್ಲಿ ರಾಮಾಯಣದ ಔಚಿತ್ಯ, ಅನೌಚಿತ್ಯದ ಕುರಿತು ವಿವರಿಸಿದ್ದಾರೆ’ ಎಂದರು. ಲೇಖಕ ಎಸ್.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ, ‘ನಮ್ಮ ಪಂಚಾಂಗಗಳಲ್ಲಿ ಹೇಳಿದ ಅನೇಕ ಸಂಗತಿಗಳು ಇಂದಿನ ಆವಿಷ್ಕಾರದಿಂದ ನಿಜವಾಗುತ್ತಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.