ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಂತರ್ಜಾಲ ಆಧಾರಿತ ನಕ್ಷೆ ವ್ಯವಸ್ಥೆ ‘ದೃಷ್ಟಿ’ಯನ್ನು ಸುಧಾರಿಸಲು ಮುಂದಾಗಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಸಮೀಕ್ಷೆ ಆರಂಭಿಸಿದೆ.
ಗೂಗಲ್ ಅರ್ಥ್ ನೆರವಿನಿಂದ ನಗರದ ಸಂಪೂರ್ಣ ನಕ್ಷೆ, ಜಮೀನಿನ ವಿವರ ತೋರಿಸುವ ವ್ಯವಸ್ಥೆ ಇದಾಗಿದೆ.
ದೃಷ್ಟಿ ವ್ಯವಸ್ಥೆಯ ನಿರಂತರ ಬಳಕೆದಾರರಿಗೆ ಇ– ಮೇಲ್ ಕಳಿಸಿರುವ ನಿರ್ವಾಹಕರು, ಈ ವ್ಯವಸ್ಥೆ ಸುಧಾರಣೆಗೆ ಸಲಹೆಗಳನ್ನು ಕೇಳಿದ್ದಾರೆ. ಸೇವೆ ತೃಪ್ತಿ ತಂದಿದೆಯೇ, ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಸಾಧ್ಯವೆ, ಈ ಬಗ್ಗೆ ಇತರೆ ಸಲಹೆಗಳನ್ನು ನೀಡಿ ಎಂಬ ಕಾಲಂಗಳನ್ನು ಸಲಹಾಪಟ್ಟಿಯಲ್ಲಿ ಕೇಳಲಾಗಿದೆ. ಕೆಲ ತಿಂಗಳ ಹಿಂದೆ ಈ ಸೇವೆ ಸ್ಥಗಿತಗೊಂಡಿತ್ತು.
ಈ ಸೇವೆಯಿಂದ ಸರ್ಕಾರಿ ಜಮೀನು ಗುರುತಿಸಿ, ಒತ್ತುವರಿ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಸರ್ಕಾರದಲ್ಲಿರುವ ಕೆಲವರು ದೂರಿದ್ದರು. ಹೀಗಾಗಿ ಈ ಸೇವೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ದೃಷ್ಟಿ ವ್ಯವಸ್ಥೆಯನ್ನು ಖಾಸಗಿ ಕಂಪೆನಿನಿರ್ವಹಿಸುತ್ತಿದೆ. ಕಂಪೆನಿಗೆ ಗುತ್ತಿಗೆ ಆಧಾರದಲ್ಲಿ ಈ ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ವರ್ಷವೂ ಗುತ್ತಿಗೆ ನವೀಕರಣವಾಗುತ್ತದೆ. ಈ ವರ್ಷ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.