ಬೆಂಗಳೂರು: ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ‘ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಆಂದೋಲನ’ ಹಮ್ಮಿಕೊಂಡಿದೆ. ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಂದೋಲನದ ನಿರ್ದೇಶಕಿ ಕವಿತಾ ರತ್ನಾ, ‘ಮತದಾರರ ಸ್ವಾಭಿಮಾನವನ್ನು ಎತ್ತಿ ಹಿಡಿಯುವುದು ಆಂದೋಲನದ ಉದ್ದೇಶವಾಗಿದೆ.
ಡಿಜಿಟಲ್ ಮಾಧ್ಯಮ ಪ್ರಚಾರಾಂದೋಲನವನ್ನು ಆರಂಭಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿರುವ ಯುವ ಜನರನ್ನು ಚುನಾವಣೆ ಚರ್ಚೆಗೆ ಎಳೆಯಲು ಈ ಮಾಧ್ಯಮ ನೆರವಾಗಲಿದೆ’ ಎಂದರು. ‘ಮತದಾರರು ಹಣ, ಹೆಂಡ, ವಿವಿಧ ಗೃಹ ಬಳಕೆಯ ವಸ್ತುಗಳ ಆಮಿಷಕ್ಕೆ ಒಳಗಾಗಬಾರದು. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಕುರಿತು ಆಂದೋಲನದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು’ ಎಂದು ಹೇಳಿದರು.
‘ಈಗಾಗಲೇ ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ ಮುಂತಾದೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿ, ಬೆಳಗಾವಿ, ಧಾರವಾಡ, ಹಾವೇರಿ, ಗುಲ್ಬರ್ಗ, ಗದಗ, ರಾಯಚೂರು, ಕೊಪ್ಪಳ, ಚಾಮರಾಜನಗರ, ಯಾದಗಿರಿ ಮತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಭಿಯಾನವನ್ನು ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.