ADVERTISEMENT

‘ಬಂಜಾರ ಅಭಿವೃದ್ಧಿ ನಿಗಮಕ್ಕೆ ಶೀಘ್ರ ಹೆಚ್ಚು ಹಣ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:50 IST
Last Updated 14 ಡಿಸೆಂಬರ್ 2013, 19:50 IST
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ‘ಬಂಜಾರ ಚೈತನ್ಯ ಮೇಳ–2013’ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಎಚ್‌.ಆಂಜನೇಯ ಅವರು ಬೆಳಗಾವಿ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದವರ ಕುಟುಂಬಗಳಿಗೆ ಹಣ್ಣುಗಳನ್ನು ವಿತರಿಸಿದರು. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಂಘದ ಪದಾಧಿಕಾರಿಗಳು ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರಗಳು
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ‘ಬಂಜಾರ ಚೈತನ್ಯ ಮೇಳ–2013’ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಎಚ್‌.ಆಂಜನೇಯ ಅವರು ಬೆಳಗಾವಿ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದವರ ಕುಟುಂಬಗಳಿಗೆ ಹಣ್ಣುಗಳನ್ನು ವಿತರಿಸಿದರು. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಂಘದ ಪದಾಧಿಕಾರಿಗಳು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ಬಂಜಾರ ಅಭಿವೃದ್ಧಿ ನಿಗಮಕ್ಕೆ ಮುಂದಿನ ವರ್ಷ ಹೆಚ್ಚು ಹಣವನ್ನು ಬಿಡುಗಡೆ  ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ‘ಬಂಜಾರ ಚೈತನ್ಯ ಮೇಳ–2013’ ಕಾರ್ಯಕ್ರಮ  ಉದ್ಘಾಟಿಸಿ  ಮಾತನಾಡಿದರು.

‘ಬಜೆಟ್‌ನಲ್ಲಿ ಈಗಾಗಲೇ ರೂ 50 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಬೇಕು. ಸರ್ಕಾರ ನೀಡುವ ಹಣದ ಉಪಯೋಗವನ್ನು ಪಡೆಯ­ಬೇಕು’ ಎಂದರು.

‘ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ­ಗ­ಳ­ನ್ನಾಗಿ ಮಾಡಲಾಗುವುದು. ಈ ಯೋಜನೆ ಹಿಂದೆಯೇ ಜಾರಿಯಾಗಿತ್ತು. ಆದರೆ, ಇದು­ವರೆಗೂ ಅದು ವ್ಯವಸ್ಥಿತ ರೂಪ ತಾಳಿರಲಿಲ್ಲ. ಈಗ ಯೋಜನೆಗೆ ಒಂದು ವ್ಯವಸ್ಥಿತವಾದ ರೂಪು ನೀಡಿ ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದರು.

‘ಬಸವಣ್ಣನ ಕಾಲದಿಂದ ಜಾತಿ ನಾಶವಾಗಬೇಕು ಎಂದು ಬರೀ ಬಾಯಿ ಮಾತಿನಲ್ಲೇ ಪ್ರತಿಪಾದಿಸು­ತ್ತಿದ್ದೇವೆ. ಜಾತಿ ಮತ್ತು ಕಸುಬಿನ ಆಧಾರದ ಮೇಲೆ ಶೋಷಣೆಗೊಳಗಾದವರಿಗೆ ಎಲ್ಲ ಅಧಿಕಾರವೂ ದೊರೆಯಬೇಕು. ಬರೀ ಬಾಯಿ ಮಾತಿನಿಂದ, ಘೋಷಣೆ­ಯಿಂದ ಸಮಾನತೆ ಪಡೆಯಲು ಸಾಧ್ಯ­ವಿಲ್ಲ’ ಎಂದು ಹೇಳಿದರು.

‘ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಮಾನತೆಯನ್ನು ಸಾಧಿಸಿದಾಗ ಮಾತ್ರ ಜಾತಿ ನಾಶವಾಗುತ್ತದೆ. ಅಂತರ್ಜಾತಿ ವಿವಾಹದಿಂದ ಜಾತಿ ನಾಶವಾಗುತ್ತದೆ ಎಂದು ಹೇಳುತ್ತಾರೆ. ಆದರೆ, ವಿದ್ಯಾವಂತರು ಸಹ ತಮ್ಮ ಜಾತಿಯ­ವರನ್ನೇ ನೋಡಿ ಮದುವೆಯಾಗುತ್ತಾರೆ’ ಎಂದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಎಚ್‌.ಆಂಜನೇಯ ಮಾತನಾಡಿ, ‘ಬಂಜಾರ ಅಭಿವೃದ್ಧಿ ನಿಗಮಕ್ಕೆ ಶೀಘ್ರವಾಗಿ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಲಂಬಾಣಿ ಜನಾಂಗದ ಏಳಿಗೆಗೆ ಕ್ರಿಯಾ ಯೋಜನೆ ರೂಪಿಸಲಾಗುವುದು’ ಎಂದರು.

‘ನಗರದಲ್ಲಿ ನಿರ್ಮಿಸಲಾಗುತ್ತಿರುವ ಬಂಜಾರ ಭವನಕ್ಕೆ ಬಾಕಿ ಹಣವನ್ನು  ಈ ಕೂಡಲೆ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.
‘ಬೆಳಗಾವಿ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದ 22 ಜನರ ಲಂಬಾಣಿ ಕುಟುಂಬಗಳಿಗೆ ಎರಡು ಎಕರೆ ಜಮೀನು ಮತ್ತು ನೀರಾವರಿ ಪಂಪ್‌ಸೆಟ್‌ ಅನ್ನು ನೀಡಲಾಗುವುದು’ ಎಂದರು.

ಚಿತ್ರದುರ್ಗದ ಮುರುಘಾ ಮಠದ ಶಿವ­ಮೂರ್ತಿ ಮುರುಘಾ ಶರಣರು, ‘ಸಮಕಾಲೀನ ಸಂದರ್ಭದಲ್ಲಿ ಮೂಢನಂಬಿಕೆ ಮತ್ತು ಮೌಢ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಪಜೀತಿಗಳ ಕೇಂದ್ರ ಬಿಂದು ಪಂಚಾಂಗಗಳು. ಇದುವರೆಗೂ ಪಂಚಾಂಗ ನೋಡಿ ಉದ್ಧಾರವಾದ ಉದಾಹರಣೆಗಳು ಎಲ್ಲಿಯೂ ಇಲ್ಲ. ನಮ್ಮ ಪಂಚ ಅಂಗಗಳನ್ನು ನಂಬಿ ಬದುಕು ನಡೆಸಬೇಕು’ ಎಂದರು.

‘ನಾನು ಎಲ್ಲ ಜಾತಿಗಳ ಬಡವರ ಪರ’
‘ಕೆಲವರು ನಾನು ‘ಅಹಿಂದ’ ಪರವಾಗಿದ್ದೇನೆ ಎಂದು ಟೀಕೆ ಮಾಡುತ್ತಾರೆ. ಹೌದು, ನಾನು ‘ಅಹಿಂದ’ ಪರ ಇದ್ದೇನೆ, ಹಾಗೆಯೇ ಎಲ್ಲ ಜಾತಿಗಳ ಬಡವರ ಪರವಾಗಿಯೂ ಇದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಈಗಾಗಲೇ ರಾಜ್ಯದಲ್ಲಿ ಕ್ಷೀರಭಾಗ್ಯ ಯೋಜನೆಯು ಜಾರಿಯಲ್ಲಿದೆ. ಮಕ್ಕಳಿಗೆ ಈಗ  ಮೂರು ದಿನಗಳು ನೀಡುತ್ತಿರುವ ಹಾಲನ್ನು ಮುಂದಿನ ವರ್ಷದಲ್ಲಿ ಐದು ದಿನಗಳಿಗೆ ವಿಸ್ತರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT