ADVERTISEMENT

‘ಮೌಲ್ಯಗಳಿಂದ ಸದೃಢ ರಾಷ್ಟ್ರ’

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಯುವ ಜನರು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಸದೃಢ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಾನಂದ ಸ್ವಾಮೀಜಿ ಕರೆ ನೀಡಿದರು.

‘ಆವಾಜ್‌’ ಸಂಸ್ಥೆಯು ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ದೇಶದ ನಿರ್ಮಾಣದಲ್ಲಿ ಯುವ ಜನರ ಪಾತ್ರ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಯುವ ಜನರು ಉತ್ತಮ ಚಾರಿತ್ರ್ಯ ಬೆಳೆಸಿಕೊಂಡು ಗುರಿ ತಲುಪಬೇಕು. ದುಶ್ಚಟ ಹಾಗೂ ದುರಾಭ್ಯಾಸಗಳನ್ನು ಬೆಳೆಸಿಕೊಳ್ಳುವುದೇ ಸಾಮಾಜಿಕ ಸ್ವಾತಂತ್ರ್ಯ ಎಂದು ಬಹುಪಾಲು ಯುವ ಜನರು ಭಾವಿಸಿದ್ದಾರೆ. ಈ ಮನೋಭಾವ ತಪ್ಪಬೇಕು’ ಎಂದರು.

‘ಯುವ ಜನರನ್ನು ಸರಿಯಾದ ದಾರಿಗೆ ತರುವುದೇ ನಿಜವಾದ ರಾಷ್ಟ್ರ ನಿರ್ಮಾಣದ ಕೆಲಸ. ಅದನ್ನು ಬಿಟ್ಟು ಬಹುಮಹಡಿ ಕಟ್ಟಡಗಳನ್ನು ಕಟ್ಟಿ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಯುವ ಜನರನ್ನೇ ದೇಶದ ಆಸ್ತಿಯನ್ನಾಗಿಸಬೇಕಾದ್ದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.

‘ಜ್ಞಾನವೇ ಶಕ್ತಿ ಎಂಬ ಮಾತಿದೆ. ಆದರೆ, ಜ್ಞಾನವನ್ನು ಬಿಟ್ಟ ಶಕ್ತಿ ಅನಾಹುತಕಾರಿ. ಜ್ಞಾನ ಮತ್ತು ಶಕ್ತಿ ಬಳಸಿಕೊಂಡು ದೇಶವನ್ನು ಮುನ್ನಡೆಸಲು ಯುವ ಜನರು ಮುಂದಾಗಬೇಕು. ಇಲ್ಲವಾದರೆ ಮನುಷ್ಯ ಸಂಬಂಧಗಳಿಗೆ ಬೆಲೆ ಇಲ್ಲದಂತಾಗುತ್ತದೆ’ ಎಂದು ಅವರು ತಿಳಿಸಿದರು.

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್‌ ಸೇಡಂ ಮಾತನಾಡಿ, ‘ಪ್ರಸ್ತುತ ಸಂದರ್ಭದಲ್ಲಿ ಯುವ ಜನರ ಮುಂದೆ ಸವಾಲುಗಳು ಹೆಚ್ಚಾಗಿವೆ. ಯುವ ಜನರು ದೇಶದ ಏಳಿಗೆಗಾಗಿ ಶ್ರಮಿಸಲು ಸಿದ್ಧರಾಗಬೇಕು. ಮುಂದಿನ ಗುರಿಯ ಬಗ್ಗೆ ಗಮನ ಹರಿಸಬೇಕು. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಗುರಿ ತಲುಪಬೇಕು’ ಎಂದರು.

‘ಯುವ ಜನರು ಯಾವುದೇ ಸಂದರ್ಭದಲ್ಲಿ ಸೋಲಿಗೆ ಶರಣಾಗಬಾರದು. ಸೋಲುಗಳನ್ನು ಮೆಟ್ಟಿನಿಂತು, ಸವಾಲುಗಳನ್ನು ಎದುರಿಸಬೇಕು. ಯುವ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.