ADVERTISEMENT

‘ಶಿಲ್ಪ ಕಲೆಗೆ ಜಕಣಾಚಾರಿ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 20:10 IST
Last Updated 3 ಜನವರಿ 2014, 20:10 IST

ಬೆಂಗಳೂರು: ‘ಜಕಣಾಚಾರಿ ಸ್ಮರಣೆಯ ದಿನವನ್ನು ಸರ್ಕಾರವೇ ಆಚರಿಸಲು ಮುಂದಾಗ­ಬೇಕು.  ಶಿಲ್ಪ­ಕಲೆಗೆ ಜಕಣಾಚಾರಿ ಹಾಗೂ ಡಂಕಣಾ­ಚಾರಿ ನೀಡಿರುವ ಕೊಡುಗೆಯ ವಿಷಯ­ವನ್ನು ಶಾಲಾಪಠ್ಯ­ದಲ್ಲಿ ಸೇರಿಸಬೇಕು’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಅಮರಶಿಲ್ಪಿ ಜಕಣಾ­ಚಾರಿ ಸ್ಮರಣೆಯ ದಿನ’ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

‘ಜಕಣಾಚಾರಿಯ ಅಸ್ತಿತ್ವವನ್ನು ಪ್ರಶ್ನಿ­ಸುವ ಮೂಲಕ ಕೆಲವರು ವಿಶ್ವ­ಕರ್ಮ ಸಮುದಾಯವನ್ನು ಒಡೆ­ಯಲು ಯತ್ನಿ­ಸು­ತ್ತಿದ್ದಾರೆ. ಅಂಥವರ ಯತ್ನ­ವನ್ನು ವಿಫಲಗೊಳಿಸಲು ಸಮು­ದಾಯ ಒಗ್ಗಟ್ಟಾಗಿ ಬೆಳೆಯ­ಬೇಕು’ ಎಂದರು.

ಸಾಹಿತಿ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ‘ಶ್ರಮಿಕ ಸಮುದಾಯ ಎಂದಿಗೂ ಹೆಸರಿಗಾಗಿ ಕೆಲಸ ಮಾಡ­ಲಿಲ್ಲ. ಹೀಗಾಗಿ ಜಕಣಾಚಾರಿ ಅಸ್ತಿತ್ವದ ಬಗ್ಗೆ ಅನುಮಾನಿಸುವುದು ಸರಿಯಲ್ಲ. ಜಕಣಾಚಾರಿ ಇರಲಿಲ್ಲ ಎನ್ನುವುದಾ­ದರೆ ಶ್ರೀರಾಮನೂ ಇರ­ಲಿಲ್ಲ ಎಂದು ಹೇಳಬೇಕಾಗುತ್ತದೆ’ ಎಂದರು.

ಲೇಖಕ ಡಾ.ಸಿ.ಎಸ್‌. ದ್ವಾರಕಾ­ನಾಥ್‌, ‘ಸಣ್ಣ ಸಮುದಾಯಗಳ ಪರಂ­ಪ­ರೆ­ಯನ್ನು ಅವಹೇಳನ ಮಾಡುವ ಮೂಲಕ ಆ ಸಮುದಾಯಗಳ ಶಕ್ತಿ­ಯನ್ನು ಕುಗ್ಗಿಸುವ ಪ್ರಯತ್ನ ನಡೆಯು­ತ್ತಿದೆ. ಇಂತಹ ಕುತಂತ್ರದ ಬಗ್ಗೆ ಸಣ್ಣ ಸಮುದಾಯಗಳು ಎಚ್ಚರವಾಗಿ­ರಬೇಕು’ ಎಂದರು.

ವಿಶ್ವಕರ್ಮ ಮಹಾ­ಸಭಾದ ಅಧ್ಯಕ್ಷ ಕೆ.ಪಿ.­ನಂಜುಂಡಿ, ‘600 ದೇವಾಲಯ­ಗ­ಳನ್ನು ನಿರ್ಮಿಸಿದ ಮಹಾನ್‌ ಶಿಲ್ಪಿ ಜಕಾಣಾಚಾರಿ. ಪ್ರತಿ ವರ್ಷ ಜನವರಿ ಒಂದರಂದು ಅವರ ಸ್ಮರಣೆಯ ದಿನ-­ವನ್ನು ಆಚರಿಸಲಾಗು­ವುದು. ರಾಜ್ಯ­ದಲ್ಲಿ 35 ಲಕ್ಷ ಜನಸಂಖ್ಯೆ­ಯಿರುವ ವಿಶ್ವ­ಕರ್ಮ ಸಮುದಾಯಕ್ಕೆ ಸೂಕ್ತ ರಾಜ­ಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ’ ಎಂದರು.

‘ವಿಶ್ವಕರ್ಮ ಮಹಾಸಭಾ ಕ್ರೆಡಿಟ್‌ ಕೋ– ಆಪರೇಟಿವ್‌ ಸೊಸೈಟಿ’ ಮತ್ತು ‘ಕಾಳಿಕಾದೇವಿ ಗೃಹ ನಿರ್ಮಾಣ ಸಹ­ಕಾರ ಸಂಘ ನಿಯಮಿತ’ಕ್ಕೆ ಚಾಲನೆ ನೀಡಲಾಯಿತು. ಮಾಜಿ ಸಚಿವ ಎಚ್‌.ಎಂ.­ರೇವಣ್ಣ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಆಪ್ತರೇ ಹೊರತು ಮುಖ್ಯಮಂತ್ರಿಯಲ್ಲ
ಸದ್ಯದ ರಾಜಕೀಯ ಬೆಳವಣಿಗೆಗಳ ವಿಚಾರದಲ್ಲಿ ಮುಖ್ಯಮಂತ್ರಿಯವರು ನನ್ನ ಮಾತು ಕೇಳುತ್ತಿಲ್ಲ ನಿಜ. ನನಗೆ ಸಿದ್ದರಾಮಯ್ಯ ಆಪ್ತರೇ ಹೊರತು ಮುಖ್ಯಮಂತ್ರಿಯಲ್ಲ. ಸಿದ್ದರಾಮಯ್ಯ ಆಪ್ತರಾಗಿರುವ ಕಾರಣಕ್ಕೆ ನಾನಿನ್ನೂ ಕಾಂಗ್ರೆಸ್‌ನಲ್ಲಿದ್ದೇನೆ. ಇಲ್ಲವಾದರೆ ಅವರಿಗೂ, ಪಕ್ಷಕ್ಕೂ ಯಾವತ್ತೋ ತಲಾಕ್‌ ಹೇಳುತ್ತಿದ್ದೆ.
–ಸಿ.ಎಂ.ಇಬ್ರಾಹಿಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.