ADVERTISEMENT

‘ಹನಿವೆಲ್‌ ವಿಜ್ಞಾನ’ ಕಾರ್ಯಕ್ರಮಕ್ಕೆ ಚಾಲನೆ

ಸರ್ಕಾರಿ ಶಾಲಾ ಮಕ್ಕಳಿಗೆ ಅನುಭವ ಆಧಾರಿತ ವಿಜ್ಞಾನ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2016, 20:25 IST
Last Updated 4 ಆಗಸ್ಟ್ 2016, 20:25 IST
ಹನಿವೆಲ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಾಲಾ ಮಕ್ಕಳು ಟೆಲಿಸ್ಕೋಪ್‌ನಲ್ಲಿ ಆಕಾಶವನ್ನು ವೀಕ್ಷಿಸಿದರು - –ಪ್ರಜಾವಾಣಿ ಚಿತ್ರ
ಹನಿವೆಲ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಾಲಾ ಮಕ್ಕಳು ಟೆಲಿಸ್ಕೋಪ್‌ನಲ್ಲಿ ಆಕಾಶವನ್ನು ವೀಕ್ಷಿಸಿದರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ  ವಿದ್ಯಾರ್ಥಿಗಳಲ್ಲಿ ವಿಜ್ಞಾನದ   ಬಗ್ಗೆ  ಕುತೂಹಲ, ಸೃಜನಶೀಲತೆ ಮೂಡಿಸುವ ಉದ್ದೇಶದಿಂದ ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇ ಷನ್ ಮತ್ತು ಹನಿವೆಲ್  ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ‘ಹನಿವೆಲ್ ವಿಜ್ಞಾನ’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

2019ರ ವೇಳೆಗೆ ಬೆಂಗಳೂರು, ದೆಹಲಿ, ಗುರುಗ್ರಾಮದ 48 ಸಾವಿರಕ್ಕೂ ಹೆಚ್ಚು  ವಿದ್ಯಾರ್ಥಿಗಳಿಗೆ ಮತ್ತು 200 ಶಿಕ್ಷಕರಿಗೆ ಅನುಭವ ಆಧಾರಿತ ವಿಜ್ಞಾನ ಶಿಕ್ಷಣ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ವಿಜ್ಞಾನ ಪ್ರಯೋಗಾಲಯ ವ್ಯವಸ್ಥೆ ಹೊಂದಿರುವ 10 ಸಂಚಾರಿ ವಾಹನಗಳು ಸರ್ಕಾರಿ ಶಾಲೆಗಳಿಗೆ ತೆರಳಿ  ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಿವೆ. ಇಸ್ರೊ ನಿರ್ದೇಶಕ ಡಾ.  ಮೈಲಾಸ್ವಾಮಿ ಅಣ್ಣಾ ದೊರೈ ಮಾತನಾಡಿ, ‘ನನ್ನ ಬಾಲ್ಯದ ವಿಭಿನ್ನ ಚಿಂತನೆಗಳೇ ನನ್ನ ಬೆಳವಣಿಗೆಗೆ ಕಾರಣ. ನಾನು ವಿದೇಶಕ್ಕೆ ಹೋಗಿದ್ದರೆ, ಇಲ್ಲಿಗಿಂತ ಹೆಚ್ಚಿನ ಹಣ ಸಂಪಾದನೆ ಮಾಡಬಹುದಿತ್ತು. ಆದರೆ, ಭಾರತದಲ್ಲೇ ಏನಾದರೂ ಸಾಧಿಸಬೇಕು ಎನ್ನುವ ತುಡಿತ ನನ್ನಲ್ಲಿ ಸದಾ ಜಾಗೃತವಾಗಿತ್ತು. ಇಂದು ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಕಲಿಯುತ್ತಿದ್ದಾರೆ’ ಎಂದರು.

‘ಈ ಹಿಂದೆ ಮೂರು ವರ್ಷಗಳಿಗೊಂದು ಉಪಗ್ರಹ ಉಡಾಯಿಸುವುದು ಕಷ್ಟವಾಗಿತ್ತು. ಆದರೆ, ಇಂದು ತಿಂಗಳಿಗೊಂದು ಉಪಗ್ರಹ ಉಡಾಯಿಸುವ ಸಾಮರ್ಥ್ಯವನ್ನು ನಾವು ಪಡೆದಿದ್ದೇವೆ. ಇದೇ ರೀತಿ ಮುಂದುವರೆದರೆ ವಾರಕ್ಕೆ ಒಂದು ಉಪಗ್ರಹ ಉಡಾಯಿಸುವ ಮಟ್ಟಿಗೆ ಅಭಿವೃದ್ಧಿ ಸಾಧಿಸಬಹುದು’ ಎಂದು ಹೇಳಿದರು.

ಹನಿವೆಲ್ ಟೆಕ್ನಾಲಜಿಯ ಮೆಹುಲ್ ಪಟೇಲ್ ಅವರು, ‘ದೇಶದ ಮುಂದಿನ ಪೀಳಿಗೆಯ ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಹುರಿದುಂಬಿಸಲು ಅಗಸ್ತ್ಯ ಫೌಂಡೇಷನ್‌ ಜತೆ  ಕೈ ಜೋಡಿಸಿದ್ದೇವೆ’  ಎಂದರು.

ಅಗಸ್ತ್ಯ ಸಂಸ್ಥೆಯ  ಅಧ್ಯಕ್ಷ ರಾಘವನ್  ‘ಅರ್ಥಿಕವಾಗಿ  ಹಿಂದುಳಿದ  ವಿದ್ಯಾರ್ಥಿ ಗಳು ಮತ್ತು ಶಿಕ್ಷಕರಿಗೆ ಪ್ರಾಯೋಗಿಕ ವಿಜ್ಞಾನದ ಕುರಿತು ತರಬೇತಿ ನೀಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.