ADVERTISEMENT

‘ಹುಸೇನ್‌ ಆದರ್ಶಗಳು ಇಂದಿಗೂ ಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:31 IST
Last Updated 15 ಡಿಸೆಂಬರ್ 2013, 19:31 IST

ಬೆಂಗಳೂರು: ಇಸ್ಲಾಂ ಧರ್ಮಕ್ಕಾಗಿ ಪ್ರವಾದಿ ಇಮಾಮ್‌ ಹುಸೇನ್‌  ಅವರು ನೀಡಿದ ಕೊಡುಗೆಯನ್ನು ರಿಚ್‌ಮಂಡ್‌ ಟೌನ್‌ನ ಶಿಯಾ ಆರಾಮ್‌ ಗಡ್‌ನಲ್ಲಿ  ಭಾನುವಾರ ಏರ್ಪಡಿಸಿದ್ದ ಸಮಾರಂಭ­ದಲ್ಲಿ ಸ್ಮರಿಸಲಾಯಿತು.

ಹುಸೇನ್‌ ದಿನದ ಅಂಗವಾಗಿ ‘ಇಮಾಮ್‌ ಹುಸೇನ್‌– ಒಗ್ಗಟ್ಟಿನ ಮೂಲ’ ವಿಷಯವಾಗಿ ಸರ್ವ ಧರ್ಮ ಮುಖಂಡರ ಸಂವಾದ ಸಹ ನಡೆಯಿತು.

ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುರಿ ಪೀಠ ಗೋವರ್ಧನ ಮಠದ ಜಗದ್ಗುರು ಶಂಕರಾಚಾರ್ಯ ಅದೋಕ್ಷಜನಂದ ಸ್ವಾಮೀಜಿ,   ಇಮಾಮ್‌ ಹುಸೇನ್‌ ಮಹಾನ್‌ ವ್ಯಕ್ತಿತ್ವ ಹೊಂದಿದ್ದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದರು.

ದೇಶದಲ್ಲಿ ಪ್ರಸ್ತುತ ಅಧರ್ಮ ತಾಂಡವವಾಡುತ್ತಿದೆ ಎಂದು ವಿಷಾ­ದಿಸಿದ ಅವರು, ಧಾರ್ಮಿಕ ಮುಖಂಡರು ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗ­ಬಾರದು ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿ ರಾಜನೀತಿಗೂ ಧರ್ಮದ ಮಾರ್ಗದರ್ಶನ ಅಗತ್ಯ ಎಂದು ಅವರು ಹೇಳಿದರು. 

ಮಜ್ಲಿಸ್‌ –ಇ–ಉಲಮ–ಎ–ಹಿಂದ್‌  ಪ್ರಧಾನ ಕಾರ್ಯದರ್ಶಿ ಕಲ್ಬೆ ಜಾವೇದ್‌ ನಕ್ವಿ ಸಾಹೇಬ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗತ್ತಿನಲ್ಲಿ ಶ್ರೇಷ್ಠ ರಾಷ್ಟ್ರ ನಮ್ಮದು. ಇಲ್ಲಿ ಎಲ್ಲರಿಗೂ ಎಲ್ಲ ಬಗೆಯ ಸ್ವಾತಂತ್ರ್ಯ ನೀಡಲಾಗಿದೆ ಎಂದು ಅವರು ಹೇಳಿದರು. 
ಅಜಮ್‌ಗಡದ ಜಮಿಯಾ ಆಶ್ರಫಿಯ ಉಪಾಧ್ಯಕ್ಷರಾದ ಮೌಲನಾ ಮೊಹಮದ್‌ ಇದ್ರಿಸ್‌ ಬಸ್ತವಿ ಅವರು ಹುಸೇನ್‌ರವರ ತತ್ವ, ಆದರ್ಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನವದೆಹಲಿಯ ಜವಾಹರ್‌ಲಾಲ್‌ ನೆಹರೂ ಪರ್ಷಿಯನ್‌ ಹಾಗೂ ಸೆಂಟ್ರಲ್‌ ಏಷ್ಯನ್‌ ಸ್ಟಡೀಸ್‌ ಅಧ್ಯಕ್ಷ ಪ್ರೊ.ಸಯ್ಯದ್‌ ಐನುಲ್‌ ಹುಸೇನ್‌ ಸೇರಿದಂತೆ ಹಲವರು ಹುಸೇನ್‌ ಜೀವನದ ಕುರಿತು ಶಾಯಿರಿಗಳನ್ನು ಹಾಡಿದರು.

ಸೇಂಟ್‌ ಜೊಸೆಫ್‌ ಬಾಲಕರ ಶಾಲೆಯ ಪ್ರಾಂಶುಪಾಲ ಫಾ. ಕ್ಲಿಫಾರ್ಡ್‌ ಸಿಕ್ವೇರಿಯ, ಬೆಂಗಳೂರು ಗುರುದ್ವಾರದ ರಾಜ್ಯ ಕಾರ್ಯದರ್ಶಿ ಪ್ರೊ.ಭಾಟಿಯಾ ಸಿಂಗ್‌, ಶಾಸಕರಾದ ಶಿವಶಂಕರರೆಡ್ಡಿ,  ಎನ್‌.ಎ.ಹ್ಯಾರೀಸ್‌, ರೋಷನ್‌ ಬೇಗ್‌ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.