ADVERTISEMENT

‘211 ಕಿ.ಮೀ. ರಸ್ತೆಗೆ ಡಾಂಬರು’

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 19:54 IST
Last Updated 30 ಜನವರಿ 2016, 19:54 IST
‘211 ಕಿ.ಮೀ. ರಸ್ತೆಗೆ ಡಾಂಬರು’
‘211 ಕಿ.ಮೀ. ರಸ್ತೆಗೆ ಡಾಂಬರು’   

ಬೆಂಗಳೂರು: ಬಿಬಿಎಂಪಿ ನಗರದ ರಸ್ತೆಗಳ ಡಾಂಬರೀಕರಣ ಕಾಮಗಾರಿಯನ್ನು ₹258.56 ಕೋಟಿ ವೆಚ್ಚದಲ್ಲಿ ಶೀಘ್ರ ಕೈಗೆತ್ತಿಕೊಳ್ಳಲಿದೆ. 

ಮೇಯರ್‌ ಬಿ.ಎನ್‌.ಮಂಜುನಾಥ ರೆಡ್ಡಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೆಬ್ಬಾಳ ವಿಧಾನಸಭಾ ಕ್ಷೇತ್ರ ಸೇರಿದಂತೆ ನಗರದ 211.96 ಕಿ.ಮೀ. ರಸ್ತೆಗೆ ಡಾಂಬರು ಹಾಕಲಾಗುವುದು. ತೀವ್ರ ಹದಗೆಟ್ಟ ರಸ್ತೆಗಳಿಗೆ ಮೊದಲ ಆದ್ಯತೆಯಾಗಿ ಡಾಂಬರೀಕರಣ ಮಾಡಲಾಗುವುದು’ ಎಂದರು.

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ‘ನಗರೋತ್ಥಾನ ಯೋಜನೆಯಡಿ ವಿವಿಧ ಯೋಜನೆಗಳಿಗೆ ₹700 ಕೋಟಿ ಮಂಜೂರು ಮಾಡಲಾಗಿದೆ. ಇದಕ್ಕಾಗಿ ಫೆ.25ರಂದು ಟೆಂಡರ್‌ ಕರೆಯಲಾಗುವುದು’ ಎಂದರು.

‘ನಾಲ್ಕು ತಿಂಗಳಲ್ಲಿ ನಗರದ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುವುದು. ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಈಗಾಗಲೇ 7 ಸಂಸ್ಕರಣಾ ಘಟಕಗಳನ್ನು ಆರಂಭಿಸಿದೆ’ ಎಂದು ಹೇಳಿದರು.

‘ನೈರುತ್ಯ ಹಾಗೂ ಈಶಾನ್ಯ ಪ್ರದೇಶಗಳಲ್ಲಿ ಸಂಚಾರ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು. ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಲೋಕೋಪಯೋಗಿ ಇಲಾಖೆ ಹೊಸ ಕಾರಿಡಾರ್‌ಗಳ ನಿರ್ಮಾಣಕ್ಕೆ ₹400 ಕೋಟಿ ಹಾಗೂ ಸಂಚಾರ ಮುಕ್ತ ರಸ್ತೆಗಳಿಗೆ ₹200 ಕೋಟಿ ಮಂಜೂರು ಮಾಡಿದೆ’ ಎಂದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ  ಮಾತನಾಡಿ, ‘ರಾಜ್ಯ ಸರ್ಕಾರ ನಗರೋತ್ಥಾನ ಯೋಜನೆಯಡಿ ಹೆಚ್ಚು ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.