ADVERTISEMENT

‘214 ಗ್ರಾಮಗಳಲ್ಲಿ ಮಾನವ–ಚಿರತೆ ಸಂಘರ್ಷ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2013, 19:30 IST
Last Updated 23 ಅಕ್ಟೋಬರ್ 2013, 19:30 IST

ಬೆಂಗಳೂರು: ‘ರಾಜ್ಯದ ೨೫ ಜಿಲ್ಲೆಗಳ ೨೧೪ ಗ್ರಾಮಗಳಲ್ಲಿ ಮಾನವ–ಚಿರತೆ ಸಂಘರ್ಷ ಕಂಡು ಬಂದಿದ್ದು ಮೈಸೂರು, ಹಾಸನ, ಉಡುಪಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಸಂಘರ್ಷ ತೀವ್ರವಾಗಿದೆ’ ಎಂದು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಹೇಳಿದರು.

ಅರಣ್ಯ ಇಲಾಖೆ ಮತ್ತು ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ ಜತೆಯಾಗಿ ಬುಧವಾರ ಏರ್ಪಡಿಸಿದ್ದ ಮಾನವ ಮತ್ತು ಚಿರತೆ ಸಂಘರ್ಷಕ್ಕೆ ಸಂಬಂಧಪಟ್ಟ ಮಾಹಿತಿ ಕೈಪಿಡಿ ಮತ್ತು ಭಿತ್ತಿಪತ್ರಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಕ್ಷಿತಾರಣ್ಯಗಳಿಂದ ಹಿಡಿದು ಮಾನವ ನಿರ್ಮಿತ ಪ್ರದೇಶಗಳಾದ ಕಾಫೀ ತೋಟ ಮತ್ತು ಕಬ್ಬಿನ ಗದ್ದೆಗಳವರೆಗೆ ವಿವಿಧ ರೀತಿಯ ಆವಾಸನೆಲೆಗೆ ಹೊಂದಿಕೊಳ್ಳುವ ಚಿರತೆಗಳ ಸಾಮರ್ಥ್ಯದಿಂದಾಗಿ ಸಂಘರ್ಷದ ಸಮಸ್ಯೆ ಹೆಚ್ಚಿದೆ’ ಎಂದು ತಿಳಿಸಿದರು. ‘ರಾಜ್ಯದ 26,500 ಚದರ ಕಿ.ಮೀ. ಪ್ರದೇಶದಲ್ಲಿ ಚಿರತೆಗಳು ಇರುವುದು ಕಂಡುಬಂದಿದೆ’ ಎಂದು ಹೇಳಿದರು.

‘ದೇಶದಲ್ಲಿ ಇದುವರೆಗೆ ಎಲ್ಲಿಯೂ ಚಿರತೆ ಆವಾಸನೆಲೆ ಕುರಿತಂತೆ ವಿಸ್ತೃತವಾದ ಸಮೀಕ್ಷೆಗಳು ನಡೆದಿಲ್ಲ. ರಾಜ್ಯ ಅಂತಹ ಯತ್ನಕ್ಕೆ ಕೈಹಾಕಿದ್ದು, ಕಳೆದ ಒಂದು ವರ್ಷದಿಂದ ಕ್ಷೇತ್ರ ಕಾರ್ಯ ಕೈಗೊಳ್ಳಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಚಿರತೆಗಳು ಮತ್ತು ಅವುಗಳ ಬಲಿಪ್ರಾಣಿಗಳ ಹಿಡುವಳಿಕೆ ಅಧ್ಯಯನಕ್ಕಾಗಿ, ಅಧ್ಯಯನ ಪ್ರದೇಶ ಮತ್ತು ವಿನ್ಯಾಸ ಗುರುತಿಸಿ ಸಮೀಕ್ಷೆ ನಡೆಸಲಾಗಿದೆ. ೧,೦೫೮ ಗ್ರಿಡ್‌ಗಳನ್ನು ತಯಾರಿಸಿ, ೫,೭೯೫ ಚದರ ಕಿ.ಮೀ ಪ್ರದೇಶದಲ್ಲಿ ಕಾಲುದಾರಿ/ರಸ್ತೆಗಳ ಜಾಡು ಗುರುತಿಸಿ ಅಂಕಿ–ಅಂಶ ಕಲೆ ಹಾಕಲಾಗಿದೆ.

ಅಧ್ಯಯನ ಪ್ರದೇಶದ ಭೂ ಉಪಯೋಗ ಭೂ ಆವರಣ ನಕ್ಷೆಗಳನ್ನು ಸಿದ್ಧಪಡಿಸಲಾಗಿದೆ. ೩,೦೯೩ ಚಿರತೆ ರೆಫ್ಯೂಜಿಯಾ (ಮಾನವನ ವಿಸ್ತಾರ ಬಳಕೆಗಳ ಮಧ್ಯದಲ್ಲಿರುವ ಕಲ್ಲುಬಂಡೆಗಳ ಭೂಪ್ರದೇಶ)ಗಳನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.