ADVERTISEMENT

10 ಸ್ಥಾನಕ್ಕೆ ಗೆಲುವು ನಿರಾಯಾಸ; ಒಂದಕ್ಕೆ ಮಾತ್ರ ಪ್ರಯಾಸ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಜೂನ್ 11ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಆರು, ಕಾಂಗ್ರೆಸ್ ಮೂರು ಮತ್ತು ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗಳಿಸಲಿವೆ. ನಾಲ್ಕನೇ ಸ್ಥಾನವನ್ನು ಪಡೆಯಲು ಕಾಂಗ್ರೆಸ್‌ಗೆ ಐದು ಸದಸ್ಯರ ಕೊರತೆ ಇದೆ.

ಪಕ್ಷೇತರ ಸದಸ್ಯರ ಬೆಂಬಲ ಅಥವಾ ಜೆಡಿಎಸ್‌ನ ಹೆಚ್ಚುವರಿ ಮತಗಳು ದೊರೆತರೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಮತ್ತೊಂದು ಸ್ಥಾನವನ್ನು ಪಡೆಯಲು ಅವಕಾಶವಿದೆ.

ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನ ಸಭೆಯಲ್ಲಿ ಬಿಜೆಪಿ ಹೊಂದಿರುವ ಸಂಖ್ಯಾಬಲದ ಆಧಾರದ ಮೇಲೆ ಸುಲಭವಾಗಿ ಆರು ಸ್ಥಾನಗಳನ್ನು ಗಳಿಸಲಿದೆ.

ADVERTISEMENT

ಹೀಗಾಗಿ ಆ ಪಕ್ಷ ತೆರವಾಗುವ ನಾಲ್ಕು ಸ್ಥಾನಗಳ ಜೊತೆಗೆ ಹೆಚ್ಚುವರಿಯಾಗಿ ಎರಡು ಸ್ಥಾನಗಳನ್ನು ಪಡೆಯಲಿದೆ.

ಕಾಂಗ್ರೆಸ್‌ನ ನಾಲ್ವರು ಸದಸ್ಯರು ನಿವೃತ್ತಿಯಾಗುತ್ತಿದ್ದಾರೆ. ಮೂರು ಸ್ಥಾನಗಳನ್ನು ಸುಲಭವಾಗಿ ಪಡೆಯಲು ಆ ಪಕ್ಷಕ್ಕೆ ಅವಕಾಶವಿದೆ.

ಜೆಡಿಎಸ್‌ನ ಮೂವರು ನಿವೃತ್ತಿಯಾಗುತ್ತಿದ್ದು, ಒಂದು ಸ್ಥಾನವನ್ನು ಮಾತ್ರ ಗಳಿಸಲಿದೆ. ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಗೆಲುವಿನ ನಂತರವೂ ಏಳು ಮತಗಳು ಉಳಿಯಲಿವೆ.

ಜೆಡಿಎಸ್‌ನ ಹೆಚ್ಚುವರಿ ಮತಗಳು ಮತ್ತು ಪಕ್ಷೇತರ ಸದಸ್ಯರ ಮತಗಳ ಮೇಲೆ 11ನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ನಿರ್ಧಾರವಾಗಲಿದೆ.

ಈ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 19 ಮತಗಳನ್ನು ಪಡೆಯಬೇಕು.
ರೆಡ್ಡಿಗೆ ಕೊಕ್: ಸದ್ಯ ಜೈಲಿನಲ್ಲಿರುವ ಬಿಜೆಪಿಯ ಜಿ.ಜನಾರ್ದನ ರೆಡ್ಡಿ ಅವರ ಸದಸ್ಯತ್ವದ ಅವಧಿ ಜೂನ್17ರಂದು ಮುಕ್ತಾಯವಾಗಲಿದೆ. ಅವರಿಗೆ ಮತ್ತೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ.

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲಿನಲ್ಲಿರುವ ಅವರಿಗೆ ಒಂದು ಪ್ರಕರಣದಲ್ಲಿ ಜಾಮೀನು ದೊರೆತಿದೆ.

ಆದರೆ ಮತ್ತೊಂದು ಪ್ರಕರಣ ಇನ್ನೂ ಇತ್ಯರ್ಥವಾಗದ ಕಾರಣ ಅವರಿಗೆ ಬಿಡುಗಡೆ ಭಾಗ್ಯ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.