ADVERTISEMENT

ಕೋವಿಡ್ ಚಿಕಿತ್ಸೆ: ಯಲಹಂಕದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ

ಸೆಲ್ಕೋ ಫೌಂಡೇಶನ್ ಸೇರಿದಂತೆ ವಿವಿಧ ಸಂಸ್ಥೆಗಳ ನೆರವು *ಕೊರೊನಾ ಮೂರನೇ ಅಲೆಗೆ ಪೂರ್ವಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 19:30 IST
Last Updated 16 ಜೂನ್ 2021, 19:30 IST
ಬೋಯಿಂಗ್ ಹಾಗೂ ಸೆಲ್ಕೋ ಸಂಸ್ಥೆ ನಿರ್ಮಿಸಿರುವ ಕೋವಿಡ್ ಆರೈಕೆ ಆಸ್ಪತ್ರೆಯ ಹೊರನೋಟ
ಬೋಯಿಂಗ್ ಹಾಗೂ ಸೆಲ್ಕೋ ಸಂಸ್ಥೆ ನಿರ್ಮಿಸಿರುವ ಕೋವಿಡ್ ಆರೈಕೆ ಆಸ್ಪತ್ರೆಯ ಹೊರನೋಟ   

ಬೆಂಗಳೂರು: ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಕೋ ಫೌಂಡೇಷನ್ ಸೇರಿದಂತೆ ವಿವಿಧ ಸಂಸ್ಥೆಗಳು ಯಲಹಂಕದಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್ ಆರೈಕೆ ಆಸ್ಪತ್ರೆಯನ್ನು ನಿರ್ಮಿಸಿದ್ದು, ಇದೇ ಶನಿವಾರ (ಜೂ.19) ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಿದ್ದಾರೆ.

ಈ ಆಸ್ಪತ್ರೆಯು 21 ದಿನಗಳಲ್ಲಿ ನಿರ್ಮಾಣವಾಗಿದ್ದು, ಸೌರ ವ್ಯವಸ್ಥೆಯನ್ನು ಒಳಗೊಂಡಿದೆ. ತಾಪಮಾನವನ್ನು ನಿಯಂತ್ರಿಸಬಲ್ಲ ಮಾದರಿ ವ್ಯವಸ್ಥೆ ಕೂಡ ಇದೆ. 10 ಐಸಿಯು ಹಾಸಿಗೆ, 30 ಎಚ್‌ಡಿಯು ಹಾಸಿಗೆಗಳನ್ನು ಒಳಗೊಂಡಿದೆ. ಉಳಿದ ಹಾಸಿಗೆಗಳು ವೈದ್ಯಕೀಯ ಆಮ್ಲಜನಕದ ಸಂಪರ್ಕ ಹೊಂದಿವೆ. ಒಟ್ಟು ₹ 5.5 ಕೋಟಿಯಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬೋಯಿಂಗ್ ಡಿಫೆನ್ಸ್ ಇಂಡಿಯಾ ಪ್ರೈ.ಲಿ. ₹ 3 ಕೋಟಿ ಹಾಗೂ ಸೆಲ್ಕೋ ಫೌಂಡೇಷನ್ ₹ 2.5 ಕೋಟಿ ನೀಡಿವೆ.

ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಕರ್ನಾಟಕ ವಿದ್ಯುತ್‌ ನಿಗಮವು (ಕೆಪಿಸಿಎಲ್‌) ಒದಗಿಸಿದೆ. ಆಸ್ಪತ್ರೆಯ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಯಾದ ’ಡಾಕ್ಟರ್ಸ್ ಫಾರ್ ಯು‘ ವಹಿಸಿಕೊಂಡಿದೆ.

ADVERTISEMENT

‘ಅತೀ ಕಡಿಮೆ ಅವಧಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗುಣಮಟ್ಟದ ವೈದ್ಯಕೀಯ ಸೌಲಭ್ಯ ಪಡೆಯಲು ಈ ಆಸ್ಪತ್ರೆ ಸಹಕಾರಿಯಾಗಲಿದೆ’ ಎಂದು ಬೋಯಿಂಗ್ ಡಿಫೆನ್ಸ್ ಇಂಡಿಯಾ ಪ್ರೈ.ಲಿ. ಅಧ್ಯಕ್ಷ ಸಾಹಿಲ್ ಗುಪ್ತೆ ತಿಳಿಸಿದ್ದಾರೆ.

‘ಈ ಆಸ್ಪತ್ರೆಯು ಸುಸ್ಥಿರತೆಯ ಎಲ್ಲ ಪರಿಕಲ್ಪನೆಗಳನ್ನು ಒಳಗೊಂಡಿದೆ. ಕೋವಿಡ್‍ ಬಿಕ್ಕಟ್ಟಿನ ಸಮಯದಲ್ಲಿ ಸೌರಶಕ್ತಿಯಂತಹ ಸುಸ್ಥಿರ ಶಕ್ತಿಯು ನಿರ್ಣಾಯಕ ಪಾತ್ರವಹಿಸಲಿದೆ ಎಂಬುದನ್ನು ಈ ಕಟ್ಟಡ ಸಾಬೀತುಪಡಿಸಲಿದೆ’ ಎಂದು ಸೆಲ್ಕೋ ಫೌಂಡೇಷನ್‌ನ ಸಂಸ್ಥಾಪಕ ಡಾ. ಹರೀಶ್ ಹಂದೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.