ADVERTISEMENT

14 ಲಕ್ಷ ಪಡಿತರ ಚೀಟಿ ವಿತರಣೆ ಗುರಿ: ಖಾದರ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 19:53 IST
Last Updated 8 ಜೂನ್ 2017, 19:53 IST
ಯು.ಟಿ.ಖಾದರ್‌
ಯು.ಟಿ.ಖಾದರ್‌   

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ತಿಂಗಳೊಳಗೆ  14  ಲಕ್ಷ  ಬಿಪಿಎಲ್‌  ಪಡಿತರ ಚೀಟಿಗಳನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಮೋಹಿಯುದ್ದೀನ್‌ ಬಾವಾ ಪ್ರಶ್ನೆಗೆ ಉತ್ತರಿಸಿ, ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ ಆಗಿರುವುದನ್ನು  ಒಪ್ಪಿಕೊಂಡರು. ಈಗಾಗಲೇ 33 ಸಾವಿರ ಕಾರ್ಡುಗಳು ಜನರಿಗೆ ತಲುಪಿಸಲು ಸಿದ್ಧವಾಗಿವೆ. ಅಂಚೆ ಇಲಾಖೆ ಮೂಲಕ ನೇರವಾಗಿ ಅರ್ಜಿದಾರರ ಮನೆಗೆ ತಲುಪಿಸಲಾಗುತ್ತದೆ. ಆಧಾರ್‌ ಕಾರ್ಡ್‌ ಇಲ್ಲದಿದ್ದರೂ ಪಡಿತರ ಚೀಟಿ ಪಡೆಯಬಹುದು ಎಂದರು.

ಲಕ್ಷಾಂತರ  ಜನ ಕಾಯುತ್ತಿದ್ದಾರೆ: ‘ರಾಜ್ಯದಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಅದರ ವಿತರಣೆ ಆಗಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಸದನದ ಗಮನಕ್ಕೆ ತಂದರು.

ADVERTISEMENT

ಶೆಟ್ಟರ್‌ ಮಾತನ್ನು ಸಮರ್ಥಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಅರ್ಜಿದಾರರು  ಆಧಾರ್‌ ಸಂಖ್ಯೆ ಜೋಡಣೆ ಮಾಡದ ಕಾರಣ ತೊಂದರೆಗೆ ಸಿಲುಕಿದ್ದಾರೆ ಎಂದರು.

ಶಾಸಕರ ಕಳವಳಕ್ಕೆ ಉತ್ತರಿಸಿದ  ಖಾದರ್‌, ‘ಕಳೆದ ಮೂರು ತಿಂಗಳಲ್ಲಿ 14.70 ಲಕ್ಷ  ಬಿಪಿಎಲ್‌ ಪಡಿತರ ಚೀಟಿಗಾಗಿ ಅರ್ಜಿಗಳು ಬಂದಿರುವುದು ನಿಜ. ಪಡಿತರ ಚೀಟಿ ಮುದ್ರಣ ಮತ್ತು ಅರ್ಜಿದಾರರ ಮನೆಗಳಿಗೆ ತಲುಪಿಸುವ ಪೈಲಟ್‌ ಯೋಜನೆ ಕಾರವಾರ ಜಿಲ್ಲೆಯಲ್ಲಿ ಯಶಸ್ವಿ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.