ADVERTISEMENT

1,433 ಹುದ್ದೆಗಳ ಭರ್ತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2011, 19:30 IST
Last Updated 28 ಸೆಪ್ಟೆಂಬರ್ 2011, 19:30 IST
1,433 ಹುದ್ದೆಗಳ ಭರ್ತಿಗೆ ಆದೇಶ
1,433 ಹುದ್ದೆಗಳ ಭರ್ತಿಗೆ ಆದೇಶ   

ಬೆಂಗಳೂರು: `ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಲು ಹಾಗೂ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರ ಆದ್ಯತೆ ನೀಡಿದ್ದು, ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ 1,433 ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ~ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

ನಗರದ ಕೆ.ಜಿ. ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಂದಾಯ ಭವನಕ್ಕೆ ಬುಧವಾರ ಭೇಟಿ ನೀಡಿದ ಅವರು, ಭವನದಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಮತ್ತು ಕೇಂದ್ರ ಆಡಳಿತ ನ್ಯಾಯಮಂಡಳಿಗಳಿಗೆ ನೀಡಲಾಗಿರುವ ಸ್ಥಳಾವಕಾಶವನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು.

`ರಾಜ್ಯದ ವಿವಿಧ ಅಧೀನ ನ್ಯಾಯಾಲಯಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದ್ದು, ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಅದರಂತೆ `ಸಿ~ ಮತ್ತು `ಡಿ~ ದರ್ಜೆಯ 1,433 ಹುದ್ದೆಗಳನ್ನು 2007ರ ಕರ್ನಾಟಕ ಅಧೀನ ನ್ಯಾಯಾಲಯ (ನೇಮಕಾತಿ/ತಿದ್ದುಪಡಿ) ನಿಯಮಗಳ ಅನ್ವಯ ನೇರ ನೇಮಕಾತಿ ಮಾಡಲು ಸರ್ಕಾರ ಇದೇ 22ರಂದು ಅನುಮೋದನೆ ನೀಡಿದೆ~ ಎಂದು ಅವರು ಹೇಳಿದರು.

`ಈ ಪೈಕಿ 106 ಪ್ರಥಮ ದರ್ಜೆ ಸಹಾಯಕರು, 275 ದ್ವಿತೀಯ ದರ್ಜೆ ಸಹಾಯಕರು, 123 ಶೀಘ್ರಲಿಪಿಗಾರರು, 203 ಬೆರಳಚ್ಚುಗಾರರು, 144 ಬೆರಳಚ್ಚುಗಾರರು/ ನಕಲುಗಾರರು, 187 ಮಂದಿ ಪ್ರೊಸೆಸ್ ಸರ್ವರ್‌ಗಳು, `ಡಿ~ ದರ್ಜೆಯ 200 ಹುದ್ದೆ ಹಾಗೂ 7 ಮಂದಿ ಚಾಲಕರ ನೇಮಕಾತಿಗೆ ಮಂಜೂರಾತಿ ದೊರೆತಿದ್ದು, ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ~ ಎಂದು ಹೇಳಿದರು.

ಕಂದಾಯ ಭವನದಲ್ಲಿ ಕೆ.ಎ.ಟಿ:  `ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಗೆ ನೂತನ ಕಂದಾಯ ಭವನದ 6 ಮತ್ತು 7ನೇ ಮಹಡಿಗಳಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. 7ನೇ ಮಹಡಿಯಲ್ಲಿ 25,000 ಚದರ ಅಡಿ ಹಾಗೂ 6ನೇ ಮಹಡಿಯಲ್ಲಿ 10,000 ಚದರ ಅಡಿ ಸ್ಥಳಾವಕಾಶ ನೀಡಲಾಗಿದೆ. ಈ ನ್ಯಾಯಾಲಯಗಳ ಒಳಾಂಗಣ ವಿನ್ಯಾಸ ಹಾಗೂ ಪೀಠೋಪಕರಣ ಅಳವಡಿಕೆಗೆ 4.85 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ~ ಎಂದರು.

`ನವೆಂಬರ್‌ನಲ್ಲಿ ವಕೀಲರ ದಿನ ಆಚರಣೆ ಸಂದರ್ಭದಲ್ಲಿ ಇವು ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ಹಾಗೂ ಪಾದಚಾರಿ ಮೇಲು ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಕರೆಯಲಾಗಿದೆ~ ಎಂದರು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್ ಮನೋಳಿ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಠಿಯಾ, ವಸತಿ ಇಲಾಖೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಕಾನೂನು ಇಲಾಖೆ ಕಾರ್ಯದರ್ಶಿ ಸಿದ್ದಲಿಂಗೇಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ಕರ್ನಾಟಕ ಆಡಳಿತ ನ್ಯಾಯಮಂಡಳಿ ರಿಜಿಸ್ಟ್ರಾರ್ ಸರೋಜಾ ಮತ್ತು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.