ADVERTISEMENT

15ರಂದು ಸರ್ಕಾರದ ಸಭೆ

ಮೆಟ್ರೊ ಎರಡನೇ ಹಂತದ ಪಥ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:34 IST
Last Updated 10 ಜೂನ್ 2013, 19:34 IST

ಬೆಂಗಳೂರು: ನಗರದ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆಯ ಬಳಿ `ನಮ್ಮ ಮೆಟ್ರೊ' ಪಥ ಬದಲಾವಣೆಯಿಂದ ಉದ್ಭವಿಸಿರುವ ವಿವಾದ ಸೇರಿದಂತೆ ಮೆಟ್ರೊ ಸಂಬಂಧಿಸಿದ ವಿವಿಧ ವಿಷಯಗಳ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಇದೇ 15ರಂದು ಸಭೆ ಕರೆದಿದ್ದಾರೆ.

`ನಮ್ಮ ಮೆಟ್ರೊ'ದ ಎರಡನೇ ಹಂತಕ್ಕೆ ಅನುಮೋದನೆ ಪಡೆಯಲು ಇದೇ 25ರಂದು ನಡೆಯಲಿರುವ ಕೇಂದ್ರ ಸರ್ಕಾರದ ಸಾರ್ವಜನಿಕ ಹೂಡಿಕೆ ಸಮಿತಿ (ಪಿಐಬಿ) ಸಭೆಯು ನಿರ್ಣಾಯಕ ಎನಿಸಿದೆ. ಈ ನಡುವೆ, ಅನುಮೋದನೆ ಪಡೆಯಲು ಬೆಂಗಳೂರು ಮೆಟ್ರೊ ರೈಲು ನಿಗಮವು ಅಗತ್ಯ ಸಿದ್ಧತೆ ಆರಂಭಿಸಿದೆ.

ಜೂನ್ 25ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಯ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದ್ದು, ಯೋಜನೆಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಎರಡನೇ ಹಂತದ ಯೋಜನೆಗೆ 2011ರಲ್ಲೇ ಅನುಮೋದನೆ ನೀಡಿತ್ತು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಎರಡನೇ ಹಂತದ ಯೋಜನೆ ಬಗ್ಗೆ ಉಲ್ಲೇಖ ಮಾಡಿರಲಿಲ್ಲ. ಕಳೆದ ವರ್ಷವೇ ವಿಸ್ತ್ರತ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, `ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಇದೇ 15ರಂದು ಸಭೆ ಕರೆದಿದ್ದು, ಎರಡನೇ ಹಂತದ ಯೋಜನೆಯ ಬಗ್ಗೆ ವಿವರವಾದ ಮಾಹಿತಿ ನೀಡಲಾಗುವುದು' ಎಂದರು. `ಇದು ಜಯದೇವ ಆಸ್ಪತ್ರೆಯ ಬಳಿ ಮತ್ತೆ ಪಥ ಬದಲಾವಣೆ ಮಾಡಲು ಕರೆದಿರುವ ಸಭೆ ಅಲ್ಲ' ಎಂದು ಸ್ಪಷ್ಟಪಡಿಸಿದರು.

`ಯೋಜನೆಯನ್ನು ಸರ್ಕಾರದ ಮುಂದೆ ಮಂಡಿಸಬೇಕು ಎಂದು ಕೆಲವು ಸಮಯದ ಹಿಂದೆಯೇ ನಿರ್ಧರಿಸಲಾಗಿತ್ತು. ಸಾರ್ವಜನಿಕ ಹೂಡಿಕೆ ಸಭೆಗೂ ಮುನ್ನ ಮುಖ್ಯಮಂತ್ರಿ ಅವರ ಎದುರು ಯೋಜನೆಯನ್ನು ಮಂಡಿಸಬೇಕು ಎಂದು ಯೋಜಿಸಲಾಗಿತ್ತು.

ಮುಖ್ಯಮಂತ್ರಿಗಳು ಬಿಡುವು ಇಲ್ಲದ ಕಾರಣ ಜಿಲ್ಲಾ ಉಸ್ತುವಾರಿ ಸಚಿವರ ಎದುರಲ್ಲಿ ಯೋಜನೆಯನ್ನು ಮಂಡಿಸಲಾಗುವುದು' ಎಂದು ಅವರು ತಿಳಿಸಿದರು.

ಯೋಜನೆಯ ವೆಚ್ಚದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಹಣಕಾಸು ಇಲಾಖೆ ಹಾಗೂ ಯೋಜನಾ ಆಯೋಗಗಳು ನಿಗಮಕ್ಕೆ ಸೂಚಿಸಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಶೈಲಂ, `ಕೇಂದ್ರದ ಸ್ಪಷ್ಟನೆಗೆ ಈಗಾಗಲೇ ಉತ್ತರ ನೀಡಲಾಗಿದೆ. ಇದೇ 25ರ ಸಭೆಯಲ್ಲಿ ಯೋಜನೆಗೆ ಅನುಮೋದನೆ ಸಿಗುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.