ADVERTISEMENT

1,500 ನರ್ತಕಿಯರ ಗಳಿಕೆಗೆ ಕುತ್ತು

ನಗರದ ಪಬ್‌, ಬಾರ್‌ಗಳಿಗೆ ಬಾಗಿಲು

ಕೆ.ಎಂ.ಸಂತೋಷ್‌ ಕುಮಾರ್‌
Published 2 ಜುಲೈ 2017, 20:11 IST
Last Updated 2 ಜುಲೈ 2017, 20:11 IST
ಮೈಸೂರು ರಸ್ತೆಯ ಅಜಾದ್‌ ನಗರದ ಬಾರ್‌ ಮತ್ತು ರೆಸ್ಟೋರಂಟ್‌ಗೆ ಬೀಗ ಹಾಕಿರುವುದು ಪ್ರಜಾವಾಣಿ ಚಿತ್ರ
ಮೈಸೂರು ರಸ್ತೆಯ ಅಜಾದ್‌ ನಗರದ ಬಾರ್‌ ಮತ್ತು ರೆಸ್ಟೋರಂಟ್‌ಗೆ ಬೀಗ ಹಾಕಿರುವುದು ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಪ್ರತಿಷ್ಠಿತ ರಸ್ತೆಗಳ ಪಬ್‌ ಮತ್ತು ಬಾರ್‌ಗಳಲ್ಲಿ ಮದ್ಯ ಮಾರಾಟ ಸ್ಥಗಿತವಾಗಿರುವುದರಿಂದ ಕಾರ್ಮಿಕರಷ್ಟೇ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿಲ್ಲ. ಕೆಲವು ಪಬ್‌, ಬಾರ್‌ಗಳಲ್ಲಿ ಮದ್ಯ ಪೂರೈಕೆ ಮಾಡಿ, ಹಾಡು, ನೃತ್ಯದ ಮೂಲಕ ಗ್ರಾಹಕರನ್ನು ಮುದಗೊಳಿಸುವ ಮೂಲಕ  ದಿನದ ಸಂಪಾದನೆಗೆ ದಾರಿ ಕಂಡುಕೊಂಡಿದ್ದ ನೃತ್ಯ ಲಲನೆಯರು (ಡ್ಯಾನ್ಸ್‌ ಗರ್ಲ್‌ಗಳು) ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲ, ಇಂದಿರಾನಗರದ ಪ್ರತಿಷ್ಠಿತ ಪಬ್‌, ಬಾರ್‌ಗಳಲ್ಲಿ ಮದ್ಯ ಸರಬರಾಜು ಮತ್ತು ಹಾಡು, ನೃತ್ಯದ ಮೂಲಕ ಗ್ರಾಹಕರ ಮನತಣಿಸುವ ವೃತ್ತಿಯಿಂದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಯುವತಿಯರು ಉದ್ಯೋಗ ಕಂಡುಕೊಂಡಿದ್ದರು. ಈ ವೃತ್ತಿಯಲ್ಲಿ ಹೊರ ರಾಜ್ಯದ ಯುವತಿಯರಷ್ಟೇ ಅಲ್ಲ, ನಮ್ಮ ರಾಜ್ಯದವರೂ ಇದ್ದಾರೆ.

‘ಈಗ ಮದ್ಯ ಮಾರಾಟ ಸ್ಥಗಿತವಾಗಿರುವುದಕ್ಕೆ ಬಾರ್‌ ಮತ್ತು ಡ್ಯಾನ್ಸ್‌ ಗರ್ಲ್‌ಗಳು ಕೆಲಸ ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಬೌನ್ಸರ್‌ಗಳು, ಸಂಗೀತ ಸಂಯೋಜಕರು (ಡಿ.ಜೆ) ಉದ್ಯೋಗ ನಷ್ಟದ ಭೀತಿ ಎದುರಿಸುತ್ತಿದ್ದಾರೆ’ ಎಂದು ಪಬ್‌ ವ್ಯವಸ್ಥಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಡಿದು ವಾಹನ ಚಲಾಯಿಸಿ ದಂಡ ತೆರುವುದನ್ನು ತಪ್ಪಿಸುವ ಉದ್ದೇಶದಿಂದ ಕೆಲ ಪ್ರತಿಷ್ಠಿತ ಪಬ್‌, ಬಾರ್‌ ಮತ್ತು ರೆಸ್ಟೋರಂಟ್‌ಗಳು ತಮ್ಮಲ್ಲಿಗೆ ಬರುವ ಗ್ರಾಹಕರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಓಲಾ, ಉಬರ್‌ ಕ್ಯಾಬ್‌ ಕಂಪೆನಿಗಳೊಂದಿಗೂ ಒಪ್ಪಂದ ಮಾಡಿಕೊಂಡಿದ್ದವು. ಪಬ್‌ಗಳು ದಿಢೀರ್‌ ಬಾಗಿಲು ಹಾಕಿರುವುದರಿಂದ ಟ್ಯಾಕ್ಸಿ ಚಾಲಕರಿಗೂ ಪ್ರಯಾಣಿಕರು ಸಿಗದೆ ದಿನದ ಸಂಪಾದನೆಯ ಮೇಲೆ ಹೊಡೆತ ಬಿದ್ದಿದೆ’ ಎಂದು ಕೋಲಾರದ ಟ್ಯಾಕ್ಸಿ ಚಾಲಕ ಬಾಲಚಂದ್ರ ತಿಳಿಸಿದರು.

ಪ್ರತಿಷ್ಠಿತ ರಸ್ತೆಗಳು ಭಣಭಣ: ಪಬ್‌ ಪ್ರಿಯರಿಗೆ ಬೇಸರ: ಪಬ್‌ ಪ್ರಿಯರ ಪಾಲಿಗೆ ನೆಚ್ಚಿನ ತಾಣವೆನಿಸಿದ್ದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌, ರೆಸ್ಟ್‌ ಹೌಸ್‌ ರಸ್ತೆಗಳು ಭಾನುವಾರ ಚಟುವಟಿಕೆ ಇಲ್ಲದೆ, ಗ್ರಾಹಕರಿಲ್ಲದೆ ಅಕ್ಷರಶಃ  ಭಣಗುಡುತ್ತಿದ್ದವು. ಸಂಗೀತ ಆಲಿಸುತ್ತಾ, ಮದಿರೆ ಹೀರುತ್ತಾ ಮೋಜು, ಮಸ್ತಿ ಮಾಡುವ ಸಲುವಾಗಿಯೇ ಈ ರಸ್ತೆಗೆ ಹೆಚ್ಚು ಬರುತ್ತಿದ್ದವರು ಕಳೆದ ಎರಡು ದಿನಗಳಿಂದ ಇತ್ತ ಸುಳಿಯುತ್ತಿಲ್ಲ.

ಆಹಾರ ಮತ್ತು ತಂಪು ಪಾನೀಯ ಪೂರೈಸಲು ಕೆಲ ಪಬ್‌ಗಳು ಬಾಗಿಲು ತೆರೆದರೂ ಕಾಯಂ ಗ್ರಾಹಕರು ಸುಳಿಯಲಿಲ್ಲ. ವಾರದ ಅಂತ್ಯದ ದಿನಗಳಲ್ಲಿ ಕಾಲಿಡಲು ಜಾಗ ಸಿಗದಷ್ಟು ವಾಹನ ಮತ್ತು ಜನರಿಂದ ತುಂಬಿ ತುಳುಕುತ್ತಿದ್ದ  ಪ್ರತಿಷ್ಠಿತ ರಸ್ತೆಗಳು ಇವೇನಾ? ಎನ್ನುವ ಅನುಮಾನ ಕಾಡುವಷ್ಟು ಬರಿದಾದಂತೆ ಕಾಣುತ್ತಿದ್ದವು.

‘ದಿನಕ್ಕೆ ಸರಾಸರಿ ₹1 ಲಕ್ಷ ಆದಾಯ ತಂದುಕೊಡುತ್ತಿದ್ದ ಪಬ್‌ನಲ್ಲಿ ಕಳೆದ ಎರಡು ದಿನಗಳಿಂದ ದಿನಕ್ಕೆ ₹5,000 ಸಂಪಾದನೆಯಾಗುತ್ತಿಲ್ಲ. ಭಾನುವಾರ ಇಡೀ ದಿನದಲ್ಲಿ ಪಬ್‌ಗೆ ಬಂದವರು ನಾಲ್ಕು ಮಂದಿ ಗ್ರಾಹಕರು ಮಾತ್ರ. ಇದೇ ಪರಿಸ್ಥಿತಿ  ಒಂದು ವಾರ ಮುಂದುವರಿದರೆ ಪ್ರತಿಷ್ಠಿತ ರಸ್ತೆಗಳಲ್ಲಿ ಸ್ಮಶಾನ ಮೌನ ಆವರಿಸಲಿದೆ’ ಎಂದು ಹೆಸರು ಹೇಳಲು ಬಯಸದ ಬ್ರಿಗೇಡ್‌ ರಸ್ತೆಯ ಪಬ್‌ವೊಂದರ ವ್ಯವಸ್ಥಾಪಕರು ಅನಿಸಿಕೆ ವ್ಯಕ್ತಪಡಿಸಿದರು.

‘ಇಂದಿರಾನಗರದಲ್ಲಿರುವ ಪಿಕೋಸ್‌ ಪಬ್‌ನಲ್ಲಿ ನಿತ್ಯ ₹1 ಲಕ್ಷಕ್ಕೂ ಹೆಚ್ಚು ಆದಾಯವಿತ್ತು. ಭಾನುವಾರ ಇಡೀ ದಿನ ₹7,000 ಮಾತ್ರ ಸಂಪಾದನೆಯಾಗಿದೆ. ರಾತ್ರಿ 11.30ರವರೆಗೆ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಪಬ್‌ ಅನ್ನು ಗ್ರಾಹಕರಿಲ್ಲದೆ ರಾತ್ರಿ 8 ಗಂಟೆಗೆ ಬಾಗಿಲು ಹಾಕುವ ಸ್ಥಿತಿ ಎದುರಾಯಿತು’ ಎಂದು ಪಬ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

ನಗರದ ಪ್ರತಿಷ್ಠಿತ ಪಬ್‌ಗಳಷ್ಟೇ ಅಲ್ಲದೆ, ಒಬೆರಾಯ್‌, ತಾಜ್‌ ಸೇರಿದಂತೆ ಪಂಚತಾರಾ ಹೋಟೆಲ್‌ಗಳಲ್ಲೂ ಮದ್ಯ ಪೂರೈಕೆ ಸ್ಥಗಿತವಾಗಿರುವುದು ವಿಶ್ವಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಹೆದ್ದಾರಿಗಳ 500 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ಸುಪ್ರೀಂಕೋರ್ಟ್‌ ಆದೇಶದಂತೆ ಮುಚ್ಚಲಾಗಿದೆ ಎನ್ನುವ ಸಂಗತಿ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ.

ಗ್ರಾಹಕರಿಗಷ್ಟೇ ಅಲ್ಲ, ಎಂ.ಜಿ.ರಸ್ತೆ ರಾಷ್ಟ್ರೀಯ ಹೆದ್ದಾರಿ ಎನ್ನುವುದು ಪಬ್‌, ಬಾರ್‌ ಮಾಲೀಕರ ತಿಳಿವಳಿಕೆಯಲ್ಲೂ ಇರಲಿಲ್ಲ. ಗುರುವಾರ ರಾತ್ರಿಯೇ ನಗರದ ಹೃದಯ ಭಾಗದಲ್ಲಿರುವ ಪಬ್‌, ಕ್ಲಬ್‌, ಬಾರ್‌ಗಳನ್ನು ಮುಚ್ಚಿದಾಗ ಹೊಸದಾಗಿ ಜಾರಿಗೆ ಬಂದಿರುವ ಜಿಎಸ್‌ಟಿ ಕಾರಣಕ್ಕೆ  ಇರಬಹುದು. ಒಂದೆರಡು ದಿನದಲ್ಲಿ ಬಾಗಿಲು ತೆರೆಯಲಿವೆ ಎಂದು ಭಾವಿಸಿದ್ದರು.

‘ಹೆದ್ದಾರಿಯ 500 ಮೀಟರ್‌ ವ್ಯಾಪ್ತಿಯಲ್ಲಿರುವ ಕಾರಣಕ್ಕೆ ಪಬ್‌, ಬಾರ್‌ ಮುಚ್ಚಲಾಗಿದೆ ಎನ್ನುವ ಮಾಹಿತಿ ಗೊತ್ತಾಗಿ ಗ್ರಾಹಕರು ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಎಂ.ಜಿ.ರಸ್ತೆ ರಾಷ್ಟ್ರೀಯ ಹೆದ್ದಾರಿಯೇ! ಎಂದು ಕೆಲ ಗ್ರಾಹಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಪಬ್‌ ಮಾಲೀಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.