ADVERTISEMENT

1.65 ಕೋಟಿ ಮೌಲ್ಯದ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 8:40 IST
Last Updated 1 ಜನವರಿ 2011, 8:40 IST

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ಕೇಂದ್ರ ವಿಭಾಗದ ಪೊಲೀಸರು 81 ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ಮತ್ತು ಬೈಕ್‌ಗಳು ಸೇರಿದಂತೆ ಒಟ್ಟು 1.65 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಕಳವು, ದರೋಡೆ ಪ್ರಕರಣಗಳನ್ನು ಪತ್ತೆ ಮಾಡಿರುವ ಕೇಂದ್ರ ವಿಭಾಗದ ಸಿಬ್ಬಂದಿ ಎರಡೂವರೆ ಕೆ.ಜಿ ಚಿನ್ನಾಭರಣ, 13 ಲಕ್ಷ ನಗದು, 108 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ       ತಿಳಿಸಿದರು.

‘ಕೇಂದ್ರ ವಿಭಾಗದ ಪೊಲೀಸರು ಪ್ರತಿಭಟನೆ, ಕಾನೂನು ಸುವ್ಯವಸ್ಥೆ, ಅತಿ ಗಣ್ಯ ವ್ಯಕ್ತಿಗಳ ಆಗಮನ ಮತ್ತು ನಿರ್ಗಮನದ ಸಂದರ್ಭದಲ್ಲಿ ಭದ್ರತಾ ಕಾರ್ಯ ನಿರ್ವಹಿಸುವುದರ ಜತೆಗೆ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಲ್ಲೂ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ.

ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರುವ ಈ ಸಿಬ್ಬಂದಿ ತಂಡಕ್ಕೆ ಎರಡು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ’ ಎಂದು ಬಿದರಿ ಹೇಳಿದರು.

ಕಳವು ಪ್ರಕರಣದ ಆರೋಪಿಗಳಾದ ಮಹೇಶ, ಮುನಿರಾಜ, ಮಂಜುನಾಥ ಹಾಗೂ ಹರ್ಷದ್ ಪಾಷಾ ಎಂಬುವರನ್ನು ಬಂಧಿಸಿರುವ ಕಬ್ಬನ್‌ಪಾರ್ಕ್ ಪೊಲೀಸರು 52.28 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೀಗ ಹಾಕಿದ ಮನೆಗಳಿಗೆ ನುಗ್ಗಿ     ಕಳವು ಮಾಡುತ್ತಿದ್ದ ಆರೋಪದ ಮೇಲೆ ಭಾರತಿನಗರದ ವೇಲು (26) ಎಂಬಾತನನ್ನು ಬಂಧಿಸಿರುವ ಅಶೋಕನಗರ ಪೊಲೀಸರು 45 ಲಕ್ಷ ರೂಪಾಯಿ ಬೆಲೆ ಬಾಳುವ ಸುಮಾರು ಎರಡು ಕೆ.ಜಿ ಚಿನ್ನಾಭರಣ ಜಫ್ತಿ ಮಾಡಿದ್ದಾರೆ.

ಅಶೋಕನಗರ, ರಾಮಮೂರ್ತಿನಗರ,   ಬಾಣಸವಾಡಿ, ವಿದ್ಯಾರಣ್ಯಪುರ,    ಸುಬ್ರಹ್ಮಣ್ಯಪುರ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯ ಮನೆಗಳಲ್ಲಿ ಆತ ಕಳವು ಮಾಡಿದ್ದ.
ಅಲ್ಲದೇ ಕನ್ನಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ, ಚಂದ್ರಾಲೇಔಟ್,      ಪುಲಿ  ಕೇಶಿನಗರ ಮತ್ತು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ವೇಲುನನ್ನು ಈ ಹಿಂದೆ          ಬಂಧಿಸಿದ್ದರು.

 ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆತ ಪುನಃ ಕಳವು ಮಾಡುವುದನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ ಅವರ ಮಾರ್ಗದರ್ಶನದಲ್ಲಿ    ಹಲಸೂರುಗೇಟ್ ಉಪವಿಭಾಗದ ಎಸಿಪಿ  ಗಚ್ಚಿನಕಟ್ಟಿ, ಕಬ್ಬನ್‌ಪಾರ್ಕ್ ಉಪವಿಭಾಗದ ಎಸಿಪಿ ದೇವರಾಜು, ಶೇಷಾದ್ರಿಪುರ     ಉಪವಿಭಾಗದ ಎಸಿಪಿ ಎಚ್.ಎಂ.ಓಂಕಾರಯ್ಯ ಮತ್ತು ಸಿಬ್ಬಂದಿ ತಂಡ ಈ ಪ್ರಕರಣಗಳನ್ನು ಭೇದಿಸಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್        ಟಿ.ಸುನಿಲ್‌ಕುಮಾರ್, ಆಡಳಿತ   ವಿಭಾಗದ  ಹೆಚ್ಚುವರಿ ಪೊಲೀಸ್ ಕಮಿಷನರ್ ನಿಸಾರ್  ಅಹಮ್ಮದ್ ಅವರು     ಪತ್ರಿಕಾ  ಗೋಷ್ಠಿಯಲ್ಲಿ         ಹಾಜರಿದ್ದರು.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.