ADVERTISEMENT

17ಬಾರ್‌ಗಳ ಪುನರಾರಂಭಕ್ಕೆ ಅಸ್ತು

ಮಹಿಳಾ ಸಿಬ್ಬಂದಿ ಸೇವೆಗೆ ವಾರದ ನಿಷೇಧ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಬೆಂಗಳೂರು: ಅಕ್ರಮ ಚಟುವಟಿಕೆಗಳ ಆರೋಪದ ಕಾರಣ ರದ್ದು ಮಾಡಲಾಗಿದ್ದ, 17ಬಾರ್‌ಗಳ ಪುನರಾರಂಭಕ್ಕೆ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. ಆದರೆ ಅಲ್ಲಿ, ಒಂದು ವಾರದವರೆಗೆ ಮಹಿಳಾ ಸಿಬ್ಬಂದಿಯಿಂದ ಗ್ರಾಹಕರಿಗೆ ಸೇವೆ ಒದಗಿಸಬಾರದು ಎಂದು ನಿರ್ದೇಶನ ನೀಡಿದೆ.

ಮಹಿಳೆಯರು ಕೆಲಸ ಮಾಡುವ ಬಾರ್‌ಗಳ ಮೇಲೆ ದಾಳಿ ನಡೆಸಿ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರು, ಬಾರ್‌ಗಳ ಪರ ವಕೀಲರು ಸಲ್ಲಿಸಿದ ಹೇಳಿಕೆ ಆಧರಿಸಿ ಈ ನಿರ್ದೇಶನ ನೀಡಿದರು.

`ಮಹಿಳೆಯರು ಕೆಲಸ ಮಾಡುವ ಬಾರ್‌ಗಳಿಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ನಿಯಮಾವಳಿಗಳನ್ನು ರೂಪಿಸಲಾಗುವುದು' ಎಂದು ಸರ್ಕಾರದ ಪರ ವಕೀಲರು ಹೇಳಿಕೆ ಸಲ್ಲಿಸಿದರು. ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಲಾಗಿದೆ.

ದಂಡ: ಸುಪ್ರೀಂ ಕೋರ್ಟ್‌ನ ಸಂಚಾರಿ ಪೀಠವನ್ನು ಬೆಂಗಳೂರಿನಲ್ಲಿ ಆರಂಭಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ರೊಡ್ಡವೀರ ಶೆಟ್ಟಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಜಾ ಮಾಡಿರುವ ಹೈಕೋರ್ಟ್, ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

`ಸುಪ್ರೀಂ' ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಕೋರಿ ಶೆಟ್ಟಿ  ಪ್ರಧಾನಿಯವರಿಗೆ ಇದೇ 15ರಂದು ಪತ್ರ ಬರೆದಿದ್ದರು. ಯಾವುದೇ ನಿರ್ಧಾರ ಬರುವ ಮುನ್ನವೇ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.

ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಕಾರಣಕ್ಕೆ ಅವರಿಗೆ ಪೀಠ ದಂಡ ವಿಧಿಸಲಾಗಿದೆ. ಕೋರ್ಟ್‌ನ ಪೀಠವನ್ನು ಬೆಂಗಳೂರಿನಲ್ಲಿ ಆರಂಭಿಸಿದರೆ ದಕ್ಷಿಣ ಭಾರತದ ರಾಜ್ಯಗಳ ಅರ್ಜಿದಾರರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.