ADVERTISEMENT

₹1.88 ಕೋಟಿ ಮೌಲ್ಯದ ಚಿನ್ನ ಪಡೆದು ಪರಾರಿ

ಸಾಮೂಹಿಕ ವಿವಾಹದ ನೆಪದಲ್ಲಿ ವಂಚನೆ l ಸೋಮಣ್ಣ ಎಂಬಾತನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 20:17 IST
Last Updated 23 ಫೆಬ್ರುವರಿ 2018, 20:17 IST

ಬೆಂಗಳೂರು: ಸಾಮೂಹಿಕ ವಿವಾಹ ಆಯೋಜಿಸುವ ನೆಪದಲ್ಲಿ ವ್ಯಕ್ತಿಯೊಬ್ಬ ₹1.88 ಕೋಟಿ ಮೌಲ್ಯದ ಚಿನ್ನದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್‌ಗಳನ್ನು ಪಡೆದು ವಂಚಿಸಿದ್ದಾನೆ.

ಈ ಸಂಬಂಧ ಬಸವೇಶ್ವರನಗರದ 3ನೇ ಹಂತದಲ್ಲಿರುವ ದರ್ಶನ್ ಜ್ಯುವೆಲರ್ಸ್ ಮಾಲೀಕ ಧೀರಜ್ (37) ಹಾಗೂ ಬಟ್ಟೆ ವ್ಯಾಪಾರಿ ಸೂರಜ್ (35) ಬಸವೇಶ್ವರನಗರ ಠಾಣೆಗೆ ಫೆ.21ರಂದು ದೂರು ಕೊಟ್ಟಿದ್ದಾರೆ.

‘ಎಲ್.ಸೋಮಣ್ಣ, ಸಾಗರ್ ಮತ್ತು ಆಂಥೋನಿ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು, ತಾವು  ವಾಸವಾಗಿದ್ದ ಹೆಬ್ಬಾಳ ಬಳಿಯ ಗೋದ್ರೆಜ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಶಾಸಕ ಅಭ್ಯರ್ಥಿಯಾಗಿ ಪರಿಚಯ:ಧೀರಜ್ ಹಾಗೂ ಸೂರಜ್‌ ಅವರಿಗೆ ಅಕ್ಟೋಬರ್‌ನಲ್ಲಿ ಸೋಮಣ್ಣ ಪರಿಚಯವಾಗಿದ್ದ. ಆತ, ‘ನಾನು ಈ ಬಾರಿಯ ವಿಧಾನಸಭೆ ಚುನಾವಣೆಗೆ ಮೈಸೂರು ಕ್ಷೇತ್ರದಿಂದ ಸ್ಪ‍ರ್ಧಿಸುತ್ತಿದ್ದೇನೆ’ ಎಂದು ಪರಿಚಯಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.

‘ಮೈಸೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಅದಕ್ಕಾಗಿ 507 ಚಿನ್ನದ ತಾಳಿಗಳು ಹಾಗೂ 85 ಚಿನ್ನದ ಬಿಸ್ಕತ್‌ಗಳು ಬೇಕು. ಅವುಗಳನ್ನು ಮಾಡಿಸಿಕೊಡಿ’ ಎಂದು ದೂರುದಾರರಿಗೆ ಮನವಿ ಮಾಡಿದ್ದ.’

‘ಆತನ ಮಾತು ನಂಬಿದ್ದ  ದೂರು
ದಾರರು, ಅಷ್ಟು ಚಿನ್ನಕ್ಕೆ ತಗಲುವ ಅಂದಾಜು ವೆಚ್ಚ ತಿಳಿಸಿದ್ದರು. ಅದಕ್ಕೆ ಆರೋಪಿ, ‘ನಮ್ಮ ಟ್ರಸ್ಟ್‌ ವತಿಯಿಂದ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದು, ಮುಂಗಡವಾಗಿ ಹಣ ಕೊಡಲು ಆಗುವುದಿಲ್ಲ. ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಮಾಡುವೆ’ ಎಂದರು’

‘ಸಂಬಂಧಿಕರಿಂದ ಸಾಲ ಪಡೆದ ಹಣದಲ್ಲಿ ದೂರುದಾರರು, ಚಿನ್ನದ ತಾಳಿ ಹಾಗೂ ಬಿಸ್ಕತ್‌ಗಳನ್ನು ಸಿದ್ಧಪಡಿಸಿ ಆರೋಪಿಗೆ ನೀಡಿದ್ದರು. ಅವುಗಳನ್ನು ಪಡೆದ ಆತ, ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸುವೆ ಎಂದು ಮತ್ತೆ ಹೇಳಿ ಹೋಗಿದ್ದ. ಕೆಲ ದಿನಗಳಾದರೂ ಹಣ ವರ್ಗಾವಣೆ ಮಾಡಿರಲಿಲ್ಲ.’

ಈ ಸಂಬಂಧ ಧೀರಜ್ ಅವರು ಸೋಮಣ್ಣನಿಗೆ ಕರೆ ಮಾಡಿ ಹಣದ ಬಗ್ಗೆ ವಿಚಾರಿಸಿದ್ದರು. ಆಗ ಆತ, ‘ನಿನಗೆ ಯಾವುದೇ ಹಣ ನೀಡಬೇಕಿಲ್ಲ. ನೀನು ಯಾವುದೇ ಚಿನ್ನ ಕೊಟ್ಟಿಲ್ಲ. ನಾನು ಯಾರು ಅಂತ ನಿನಗೆ ಗೊತ್ತಿಲ್ಲ. ಹಣದ ಬಗ್ಗೆ ಕೇಳಿದರೆ ನಿನ್ನ ಕತೆ ಮುಗಿಸಿಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
***
‘ಸೋಮಣ್ಣ ಬೇಡಿಕೆ ಇಟ್ಟ ಪ್ರಮಾಣದ ಚಿನ್ನ ನಮ್ಮ ಬಳಿ ಇರಲಿಲ್ಲ. ಅವುಗಳನ್ನು ಪರಿಚಯಸ್ಥರಿಂದ ತರಿಸಬೇಕಿತ್ತು. ಅದಕ್ಕೆ ಬೇಕಾದಷ್ಟು ಹಣವೂ ಇರಲಿಲ್ಲ. ಆ ಬಗ್ಗೆ ಸೋಮಣ್ಣನಿಗೆ ಹೇಳಿದ್ದೆವು. ಅದಕ್ಕೆ ಆತ, ಟ್ರಸ್ಟ್‌ ವತಿಯಿಂದ ₹6 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿದ್ದ’ ಎಂದು ದೂರಿನಲ್ಲಿ ಧೀರಜ್ ಹಾಗೂ ಸೂರಜ್ ಉಲ್ಲೇಖಿಸಿದ್ದಾರೆ.

‘ಸಾಲ ಕೊಡಿಸಲು ಬೇಕಾದ ಅಗತ್ಯ ದಾಖಲೆಗಳನ್ನು ನಮ್ಮಿಂದ ಪಡೆದಿದ್ದ. ಖಾಲಿ ಚೆಕ್‌ಗಳನ್ನು, ಬಾಂಡ್‌ ಹಾಗೂ ಜಮೀನು ಪತ್ರ
ಗಳನ್ನು ನೀಡಿದ್ದೇವೆ’ ಎಂದಿದ್ದಾರೆ.

ಚೆಕ್ ಬೌನ್ಸ್‌: ‘ನಮ್ಮನ್ನು ನಂಬಿಸುವ ಸಲುವಾಗಿ ₹ 33 ಲಕ್ಷ, ₹24 ಲಕ್ಷ ಹಾಗೂ ₹ 24 ಲಕ್ಷ ಮೊತ್ತಕ್ಕೆ ಐಡಿಬಿಐ ಹಾಗೂ ಆ್ಯಕ್ಸಿಸ್ ಬ್ಯಾಂಕಿನ ಚೆಕ್‌ಗಳನ್ನು ನೀಡಿದ್ದ. ಅವುಗಳನ್ನು ಬ್ಯಾಂಕಿಗೆ ಹಾಕಿದಾಗ ಆತನ ಖಾತೆಯಲ್ಲಿ ಹಣವಿಲ್ಲ ಎಂದು ಗೊತ್ತಾಗಿತ್ತು. ಆ ಬಗ್ಗೆ ಪ್ರಶ್ನಿಸಿದಾಗ, ‘ತಾಂತ್ರಿಕ ಅಡಚಣೆಯಿಂದಾಗಿ ಖಾತೆ ಹಣ ವರ್ಗಾವಣೆ ಆಗಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇನೆ’ ಎಂದಿದ್ದ’ ಎಂದು ದೂರುದಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.