ADVERTISEMENT

‘192 ಟಿಎಂಸಿ ಅಡಿ ನೀರು ಉಳಿತಾಯ ಸಾಧ್ಯ’

ಸುಧಾರಿತ ನೀರಾವರಿ ತಂತ್ರಜ್ಞಾನ ಬಳಕೆ: ರಾಜಾರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:47 IST
Last Updated 20 ಅಕ್ಟೋಬರ್ 2016, 19:47 IST
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ವಿ. ಬಾಲಸುಬ್ರಹ್ಮಣ್ಯಂ ಮತ್ತು ನೀರಾವರಿ  ತಜ್ಞ  ಕ್ಯಾ. ಎಸ್‌. ರಾಜಾರಾವ್‌ ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರ 
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಹ್ಮಣ್ಯಂ ಮತ್ತು ನೀರಾವರಿ ತಜ್ಞ ಕ್ಯಾ. ಎಸ್‌. ರಾಜಾರಾವ್‌ ಪಾಲ್ಗೊಂಡಿದ್ದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಹನಿ ನೀರಾವರಿಯಂತಹ ಸುಧಾರಿತ ನೀರಾವರಿ ತಂತ್ರಜ್ಞಾನಗಳನ್ನು ಬಳಸುವುದರಿಂದ ರಾಜ್ಯದಾದ್ಯಂತ ವರ್ಷದಲ್ಲಿ 192 ಟಿಎಂಸಿ ಅಡಿಯಷ್ಟು ನೀರು ಉಳಿತಾಯ ಮಾಡಲು ಸಾಧ್ಯವಿದೆ’ ಎಂದು ನೀರಾವರಿ  ತಜ್ಞ  ಕ್ಯಾ.ಎಸ್‌. ರಾಜಾರಾವ್‌ ಅಭಿಪ್ರಾಯಪಟ್ಟರು.

ವಿದ್ಯಮಾನ ವೇದಿಕೆ ಕರ್ನಾಟಕ  (ವಿವೇಕ) ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು, ಕಾವೇರಿ– ಮಹದಾಯಿ ಬಗೆಹರಿಯದ ಬಿಕ್ಕಟ್ಟು: ಮುಂದೆ ಹೇಗೆ?’ ಕುರಿತು ಮಾತನಾಡಿದರು.

‘ರಾಜ್ಯ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ  ಕೇವಲ 40 ಸಾವಿರ ಎಕರೆ ಕಬ್ಬು ಬೆಳೆಯಬಹುದು ಎಂದು ನ್ಯಾಯಮಂಡಳಿ ಆದೇಶದಲ್ಲಿ ಹೇಳಲಾಗಿದೆ. ಕಬ್ಬು ಬೆಳೆಯನ್ನು ಇಷ್ಟು ಪ್ರದೇಶಕ್ಕೆ ಸೀಮಿತಗೊಳಿಸಿದರೆ ಮಂಡ್ಯ ಮೈಸೂರು ಪ್ರದೇಶದ  ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಬೇಕಾಗುತ್ತದೆ’ ಎಂದರು.

ADVERTISEMENT

‘ರಾಜ್ಯದ ಯಾವುದೇ ಏತ ನೀರಾವರಿ ಯೋಜನೆಗೂ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿಲ್ಲ. 2051ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕುಡಿಯುವ ನೀರು ಹಂಚಿಕೆ ಮಾಡಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಆದರೆ, ನ್ಯಾಯಮಂಡಳಿ 2011ರ ಜನಸಂಖ್ಯೆ ಆಧಾರದಲ್ಲಿ   ನೀರು ಹಂಚಿಕೆ ಮಾಡಿತು’ ಎಂದು ಅಚ್ಚರಿ ವ್ಯಕ್ತಪಡಿಸಿದರು.

‘ಕುಡಿಯುವ ನೀರಿಗಾಗಿ 47 ಟಿಎಂಸಿ ಅಡಿ ನೀಡುವಂತೆ ಕರ್ನಾಟಕ ಕೇಳಿತ್ತು.  ನ್ಯಾಯಮಂಡಳಿ ಕೇವಲ 8.75 ಟಿಎಂಸಿ ಅಡಿ ನೀರು ಒದಗಿಸಿದ್ದು, ಇದು ಯಾವುದಕ್ಕೂ ಸಾಲದು. ಕುಡಿಯುವ ನೀರಿಗೆ ಅಂತರ್ಜಲ ಮೂಲವನ್ನು ಬಳಸುವಂತೆ ನ್ಯಾಯಮಂಡಳಿ ಸಲಹೆ ನೀಡಿದೆ.  ಬೆಂಗಳೂರು ನಗರ,  ಗ್ರಾಮಾಂತರ ಹಾಗೂ ರಾಮನಗರ,  ಜಿಲ್ಲೆಗಳಲ್ಲಿ ಅಂತರ್ಜಲ ಆರ್ಸೆನಿಕ್‌, ನೈಟ್ರೇಟ್‌ ಅಂಶಗಳಿಂದ ಕೂಡಿದೆ. ಈ ನೀರು ಕುಡಿಯಲು ಯೋಗ್ಯವಲ್ಲ. ಅಂತರ್ಜಲ ಮಟ್ಟವೂ ಪಾತಾಳಕ್ಕೆ ಕುಸಿದಿದೆ’ ಎಂದರು.

‘2051ರಲ್ಲಿ ಬೆಂಗಳೂರಿನ ಜನಸಂಖ್ಯೆ 3.5 ಕೋಟಿ ದಾಟಲಿದೆ. ಆಗ ನಗರದ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಕೆಆರ್‌ಎಸ್‌, ಕಬಿನಿ, ನೀರೂ ಸಾಲಲಿಕ್ಕಿಲ್ಲ’ ಎಂದರು.

‘ಸಂಕಷ್ಟದ ವರ್ಷಗಳಲ್ಲಿ ಮಳೆ ಕೊರತೆಯ ಪ್ರಮಾಣಕ್ಕೆ ಅನುಗುಣವಾಗಿ ನೀರು ಹಂಚಿಕೊಳ್ಳುವಂತೆ ನ್ಯಾಯಮಂಡಳಿ ಆದೇಶ ನೀಡಿದೆ. ಆದರೆ ಸಂಕಷ್ಟ ಎದುರಾಗಿದೆಯೇ ಎಂಬುದನ್ನು  ತಕ್ಷಣ ನಿರ್ಧರಿಸುವುದಕ್ಕೆ ನಮ್ಮಲ್ಲಿ ವ್ಯವಸ್ಥೆಯೇ ಇಲ್ಲ. ಕೇಂದ್ರ ಸರ್ಕಾರ ಮಳೆ ಕೊರತೆಯನ್ನು ಅಂದಾಜಿಸುವಾಗ ಮುಂಗಾರು ಮುಗಿದಿರುತ್ತದೆ.  ಅಷ್ಟರವರೆಗೆ ಕರ್ನಾಟಕ, ಮಳೆ ಇಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಬೇಕು. ಇದೆಂಥ ನ್ಯಾಯ’ ಎಂದು ಪ್ರಶ್ನಿಸಿದರು.

‘ಅಂತರರಾಜ್ಯ ನದಿ ನೀರು ಹಂಚಿಕೆ ಸಮಸ್ಯೆ ಎದುರಾಗುವುದು ಸಂಕಷ್ಟದ ವರ್ಷಗಳಲ್ಲಿ ಮಾತ್ರ. ಅದಕ್ಕೆ ಸ್ಪಷ್ಟ ಪರಿಹಾರ ಸೂಚಿಸದ ಕಾವೇರಿ ನ್ಯಾಯ ಮಂಡಳಿ 16 ವರ್ಷಗಳ ಕಾಲ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದೆ’ ಎಂದು ಆರೋಪಿಸಿದರು. 

‘ಮೇಕೆದಾಟು ಬಳಿ  ಅಣೆಕಟ್ಟು ನಿರ್ಮಿಸುವುದಕ್ಕೆ  ಯಾವ ಅಡ್ಡಿಯೂ ಇಲ್ಲ. ರಾಜ್ಯ ಸರ್ಕಾರ ಇನ್ನಷ್ಟು ತಡ ಮಾಡದೆ, ಇದನ್ನು ಮೂರು ವರ್ಷದೊಳಗೆ ಪೂರ್ಣಗೊಳಿಸಬೇಕು. ಶರಾವತಿ ಹಾಗೂ ಪಶ್ಚಿಮವಾಹಿನಿ ನದಿಗಳ ನೀರಿನ ಬಳಕೆಗೂ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು. ‘ಬೆಂಗಳೂರಿನಲ್ಲಿ ಶೇಕಡಾ 48ರಷ್ಟು ನೀರು ಸೋರಿಕೆ ಆಗುತ್ತಿರುವುದು ಗಂಭೀರ ವಿಚಾರ. ಜಲಮಂಡಳಿ   ನಗರದಲ್ಲಿ ನೀರು ಪೂರೈಕೆಯಲ್ಲಿ ಆಗುತ್ತಿರುವ ಸೋರಿಕೆ ತಡಗಟ್ಟಬೇಕು’ ಎಂದರು.

‘ಮಹಾದಾಯಿ ನದಿಯ ನೀರನ್ನು ಅದರ ಜಲಾನಯನದ ಹೊರಗಿನ ಪ್ರದೇಶಕ್ಕೆ ತಿರುಗಿಸಲು ನ್ಯಾಯಮಂಡಳಿ ಒಪ್ಪಿಗೆ ನೀಡುವುದು ಕಷ್ಟ. ನೀರಿನ ಕೊರತೆ ಎದುರಿಸುತ್ತಿರುವ ಜಲಾನಯನ ಪ್ರದೇಶದಿಂದ ಬೇರೆ ಕಡೆಗೆ ನೀರು ಪೂರೈಸಲು ನ್ಯಾಯಮಂಡಳಿ ಸಾಮಾನ್ಯವಾಗಿ ಒಪ್ಪಿಗೆ ನೀಡುವುದಿಲ್ಲ’ ಎಂದರು.
ರೈತರ ಆತ್ಮಹತ್ಯೆಗೆ ಸುಪ್ರೀಂ ಕೋರ್ಟ್ ಹೊಣೆ: ನಾಲ್ಕು ರಾಜ್ಯಗಳ ನೀರಾವರಿ ಪ್ರದೇಶಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್‌ನ ವಿಳಂಬ ಧೋರಣೆಯೇ ಕಾರಣ. ಕಾವೇರಿ ನ್ಯಾಯಮಂಡಳಿಯ ತೀರ್ಪನ್ನು ಪ್ರಶ್ನಿಸಿ ನಾಲ್ಕೂ ರಾಜ್ಯಗಳು 2007ರಲ್ಲೇ ಆಕ್ಷೇಪಣಾ ಆರ್ಜಿಗಳನ್ನು ಸಲ್ಲಿಸಿದ್ದವು. ಮೂರು ವರ್ಷದೊಳಗೆ ಈ ಅರ್ಜಿಗಳ ವಿಲೇವಾರಿ ಆಗಬೇಕಿತ್ತು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೇ ಬೇಡವೇ ಎಂದು ಈಗ ಚರ್ಚಿಸಲಾಗುತ್ತಿದೆ. ಈ ತೀರ್ಮಾನ ಕೈಗೊಳ್ಳಲು 9 ವರ್ಷಗಳು ಬೇಕೇ’  ಎಂದು ಅವರು ಪ್ರಶ್ನಿಸಿದರು.

‘ಬೆಂಗಳೂರು ಸಿಂಗಪುರ ಆಗಿದೆ’

ಬೆಂಗಳೂರನ್ನು ಸಿಂಗಪುರ ಮಾಡುವುದಾಗಿ ಈ ಹಿಂದೆ ಮುಖ್ಯಮಂತ್ರಿಯೊಬ್ಬರು ಹೇಳಿದ್ದರು. ಬೆಂಗಳೂರು ಈಗಾಗಲೇ ಸಿಂಗಪುರ ಆಗಿದೆ. ಅದು ಮೂಲಸೌಕರ್ಯದ ವಿಚಾರದಲ್ಲಿ ಅಲ್ಲ. ಕುಡಿಯುವ ನೀರಿನ ಬಳಕೆ ವಿಚಾರದಲ್ಲಿ’ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ವಿ. ಬಾಲಸುಬ್ರಹ್ಮಣ್ಯಂ ಹೇಳಿದರು.

‘ಸಿಂಗಪುರದಲ್ಲಿ ತ್ಯಾಜ್ಯನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸುತ್ತಾರೆ. ಆದೇ ರೀತಿ ಬೆಂಗಳೂರಿನಲ್ಲಿ  ತ್ಯಾಜ್ಯ ನೀರನ್ನು ಶುದ್ಧೀಕರಿಸದೆಯೇ ಕುಡಿಯಲು ಬಳಸಲಾಗುತ್ತಿದೆ. ಇಲ್ಲಿನ ಕೆರೆಗಳೆಲ್ಲ ತ್ಯಾಜ್ಯ ನೀರಿನಿಂದ ತುಂಬಿವೆ. ಅದರ ಪಕ್ಕದಲ್ಲಿ ಕೊಳವೆ ಬಾವಿಯಲ್ಲಿ ಬರುವುದು  ತ್ಯಾಜ್ಯ ನೀರೇ. ಅದನ್ನೇ  ಕುಡಿಯಲು ಪೂರೈಸಲಾಗುತ್ತಿದೆ. ಜಲಮಂಡಳಿ ಪೂರೈಸುವ ಶೇ 20ರಷ್ಟು  ನೀರಿನಲ್ಲೂ ಇ ಕೊಲೈ ಎಂಬ ರೋಗಕಾರಕ ಬ್ಯಾಕ್ಟೀರಿಯಗಳಿರುವುದು ಕಂಡುಬಂದಿದೆ’ ಎಂದು ಅವರು ಹೇಳಿದರು.

ವಿರೋಧ ಸಲ್ಲದು
‘ಕಾವೇರಿ ನಿರ್ವಹಣಾ ಮಂಡಳಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ನ್ಯಾಯಮಂಡಳಿಯ ಆದೇಶ ಸಮರ್ಪಕವಾಗಿ ಜಾರಿ ಆಗಬೇಕಾದರೆ ಇದೊಂದೇ ಪರಿಹಾರ. ಈಗಾಗಲೇ ನರ್ಮದಾ, ಗೋದಾವರಿ ಮತ್ತಿತರ ನದಿ ನೀರು ನಿರ್ವಹಣೆಗೂ ಮಂಡಳಿ ರಚಿಸಲಾಗಿದೆ’ ಎಂದು ರಾಜಾರಾವ್‌ ಹೇಳಿದರು.

ಅಂಕಿ ಅಂಶ

270ಟಿಎಂಸಿ ಅಡಿ- ಕಾವೇರಿ ನದಿಯಲ್ಲಿ ಕರ್ನಾಟಕಕ್ಕೆ ಹಂಚಿಕೆಯಾದ ನೀರಿನ ಪಾಲು

18.2ಲಕ್ಷ ಹೆಕ್ಟೇರ್‌- ಕಾವೇರಿ ನ್ಯಾಯಮಂಡಳಿಯು ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ಕೃಷಿ ಪ್ರದೇಶ

* ಮಳೆ ಬಾರದಿದ್ದರೆ ನಾವು ಒಂದು ಜಲಜನಕ ಮತ್ತು ಎರಡು ಆಮ್ಲಜನಕದ ಅಣುಗಳನ್ನು ಒಟ್ಟು ಮಾಡಿ ನೀರನ್ನು  (H2O) ಸೃಷ್ಟಿಸಿ ತಮಿಳುನಾಡಿಗೆ ಪೂರೈಕೆ  ಮಾಡಬೇಕೇ?

-ಕ್ಯಾ.ಎಸ್‌.ರಾಜಾರಾವ್‌, ನೀರಾವರಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.